ಜಾಹೀರಾತು -
ಒಂದು ಪದಾರ್ಥ, ಸೇವೆ ಮುಂತಾದವುಗಳ ವಿಕ್ರಯಕ್ಕೆ, ಒಂದು ತತ್ವ, ಸಿದ್ಧಾಂತ ಅಥವಾ ವಿಚಾರದ ಪ್ರಸಾರಕ್ಕೆ, ಒಂದು ಸಭೆಯೇ ಮುಂತಾದವುಗಳಲ್ಲಿ ಹಾಜಾರಾತಿ ಪಡೆಯುವುದಕ್ಕೆ, ಇಂಥ ಯಾವುದೇ ಉದ್ದೇಶ ಪೂರೈಕೆಗೆ, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಹಾಯಕವಾಗಬೇಕೆಂಬ ಗುರಿಯಿಂದ ಕೈಗೊಂಡ ಯಾವುದೇ ಬಗೆಯ ಸಾರ್ವಜನಿಕ ಪ್ರಕಟನೆ (ಅಡ್ವರ್ಟೈಸಿಂಗ್). ಇಂಗ್ಲಿಷಿನ ಅಡ್ವರ್ಟೈಸಿಂಗ್ ಶಬ್ದಕ್ಕೆ ಮೂಲತಃ ಸುದ್ದಿಯನ್ನು ಮುಟ್ಟಿಸುವುದು ಎಂದಷ್ಟೇ ಅರ್ಥವಿತ್ತು. ಕನ್ನಡದಲ್ಲೂ ಜಾಹೀರತು, ಜಾಹೀರಾತು ಎಂಬ ಶಬ್ದಗಳಿಗೆ ಇಂಥ ಸೀಮಿತ ಅರ್ಥವೇ ಇತ್ತು. ಅದು ನಮ್ಮ ಜಾಹೀರಾತಿಗೆ ಬಂದಿದೆ, ಎಂದರೆ ಅದು ನಮ್ಮ ಗಮನಕ್ಕೆ ಬಂದಿದೆ-ಎಂದು ಅರ್ಥವೆಂದು ಕಿಟ್ಟೆಲ್ ನಿಘಂಟು ಹೇಳುತ್ತದೆ. ಆದರೆ ಇಂದು ಜಾಹೀರಾತು ಎಂಬ ಶಬ್ದಕ್ಕೆ ಸುದ್ದಿ ಮುಟ್ಟಿಸುವುದು, ಡಂಗುರಗೊಳಿಸುವುದು ಎಂಬುದಷ್ಟೇ ಅರ್ಥವಲ್ಲ. ಮನವೊಪ್ಪಿಸುವ. ಮನಗಾಣಿಸುವ. ಪ್ರೇರೇಪಿಸುವ, ಪ್ರಚೋದಿಸುವ, ಕಾರ್ಯೋನ್ಮುಖವಾಗುವಂತೆ ಮಾಡುವ ಕ್ರಿಯೆಗಳೆಲ್ಲ ಇದರಲ್ಲಿ ಸೆರಿವೆ. ವಾಣಿಜ್ಯೋದ್ದೇಶದ ಪ್ರಚಾರಕಾರ್ಯಗಳನ್ನು ರಾಜಕೀಯ, ಧಾರ್ಮಿಕ, ಶೈಕ್ಷಣಿಕವೇ ಮುಂತಾದ ಪ್ರಚಾರಕಾರ್ಯಗಳಿಂದ ಪ್ರತ್ಯೇಕಿಸಿ ಈ ದೃಷ್ಠಿಯಿಂದ ಆಧುನಿಕ ಜಾಹೀರಾತನ್ನಾಗಲಿ ಅದರ ವ್ಯವಸ್ಥೆಯನ್ನಾಗಲಿ ವಿವೇಚಿಸುವುದು ಇಂದು ಬಹಳ ಕಷ್ಟ. ಆದರೂ ಈ ಲೇಖನದಲ್ಲಿ ಮುಖ್ಯವಾಗಿ ವಾಣಿಜ್ಯೋದ್ದೇಶದಿಂದ ಕೈಗೊಂಡ ಜಾಹೀರಾತನ್ನು ಕುರಿತ ವಿವೇಚನೆ ಇದೆ. 
ಇಂದು ವಾಣಿಜ್ಯಪ್ರಪಂಚದಲ್ಲಿ ಜಾಹೀರಾತು ಒಂದು ಪ್ರಮುಖ ಶಕ್ತಿಯಾಗಿದೆ. ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದರ ಮೂಲಕ ಉತ್ಪಾದಕರು ಪ್ರಪಂಚದ ಮೂಲೆಮೂಲೆಗಳಲ್ಲಿ ತಮ್ಮ ಸರಕುಸೇವೆಗಳಿಗೆ ಉಪಯುಕ್ತ ಮಾರುಕಟ್ಟೆ ದೊರಕಿಸಿಕೊಂಡಿದ್ದಾರೆ. ಜಾಹೀರಾತು ಕಲೆಯನ್ನು ಯಂತ್ರದಿಂದಾದ ಭೂರಿ ಉತ್ಪಾದನೆಯ ವಿಕ್ರಯದ ಹಾಗೂ ವಿಕ್ರಯದಾರನ ವ್ಯಕ್ತಿತ್ವದ ಪ್ರಭಾವ ಎಂದು ವರ್ಣಿಸಿದ್ದಾರೆ. ವಿಕ್ರಯದ ಸಲುವಾಗಿ ವಿಷಯದ ಸಂಗ್ರಹ ಮತ್ತು ವಿತರಣೆಯೇ, ಸರಕುಗಳನ್ನೂ, ಸೇವೆಗಳನ್ನೂ ಬಿಕರಿ ಮಾಡುವ ಇಲ್ಲವೇ ಸರಕುಗಳ ಬಗ್ಗೆ ಜನರು ನಿರ್ದಿಷ್ಟ ರೀತಿಯಲ್ಲಿ ವಿಚಾರ ಮಾಡುವಂತೆ ನೀಡುವ ಪ್ರೇರೇಪಣೆಯೇ ಜಾಹೀರಾತು. ಸರಕುಗಳನ್ನು, ಸೇವೆಗಳನ್ನು ಆದಷ್ಟು ಕಡಿಮೆ ವೆಚ್ಚದಲ್ಲಿ ಆದಷ್ಟು ಹೆಚ್ಚು ಗ್ರಾಹಕರಿಗೆ ಒದಗಿಸುವುದು, ಅವನ್ನು ಕೊಳ್ಳುವ ಬಯಕೆಯನ್ನು ಗ್ರಾಹಕರಲ್ಲಿ ಕೆರಳಿಸುವುದು ಜಾಹೀರಾತಿನ ಮುಖ್ಯ ಉದ್ದೇಶ. ಈ ದೃಷ್ಟಿಯಿಂದ ಜಾಹೀರಾತು ಸಾಮಾನ್ಯ ಪ್ರಚಾರಕ್ಕಿಂತ ಭಿನ್ನವಾದ್ದು. 

 	ಇಂದು ಉತ್ಪಾದಕರು ಜಾಹೀರಾತಿಗೆ ಉಪಯೋಗಿಸುವ ಹಣವನ್ನು ಉತ್ಪಾದನವೆಚ್ಚವೆಂದೇ ತಿಳಿದಿದ್ದಾರೆ. ಜಾಹೀರಾತಿಗಾಗಿ ಅಪಾರವಾದ ಹಣವನ್ನೂ ಶ್ರಮವನ್ನೂ ವೆಚ್ಚಮಾಡುತ್ತಾರೆ. ಏಕೆಂದರೆ ಒಮ್ಮೆ ಜಾಹೀರಾತಿಗೆ ತೊಡಗಿಸಿದ ಹಣ ಆ ಸರಕುಗಳಿಗೆ ಬೇಡಿಕೆಯನ್ನು ಹೆಚ್ಚಿಸಿ, ಒಂದಲ್ಲ ಒಂದು ದಿನ ಒಂದಲ್ಲ ಒಂದು ರೂಪದಲ್ಲಿ ಹಿಂದಿರುಗಿ ಬರುವುದೆಂಬ ಭರವಸೆ ಅವರಿಗಿದೆ. ಜಾಹೀರಾತಿನಲ್ಲಿ ತೊಡಗಿಸುವ ಹಣ ಲಾಭದಾಯಕವೆನಿಸಿದೆ.
ಜಾಹೀರಾತು ಮಾಡುವುದು ವಿಕ್ರಯ ಕಲೆಯ ಒಂದು ಅವಿಭಾಜ್ಯ ಅಂಗವಾಗಿದೆ. ವಿಕ್ರಯ ವ್ಯವಸ್ಥೆಯ ನಿರ್ವಾಹಕನು ಜಾಹೀರಾತು ಕಲೆಯ ಮರ್ಮವನ್ನು ಬಲ್ಲವನಾದರೆ ಮಾತ್ರ ಅದರಲ್ಲಿ ಯಶಸ್ಸು ದೊರಕುತ್ತದೆ. ಜಾಹೀರಾತಿನ ಉದ್ದೇಶ ಕಾರ್ಯವ್ಯಾಪ್ತಿಗಳು ಇವು : 1 ಮಾರುಕಟ್ಟೆಗೆ ಬಂದ ಹೊಸ ಸರಕಿನ ಬಗ್ಗೆ ಗ್ರಾಹಕರ ಗಮನವನ್ನು ಸೆಳೆಯುವುದು. 2 ಅದನ್ನು ಉಪಯೋಗಿಸುವ ಜನಸಾಮಾನ್ಯರಿಗೆ ಆ ವಸ್ತುಗಳ ಉಪಯುಕ್ತತೆಯ ಬಗ್ಗೆ ಶಿಕ್ಷಣ ನೀಡುವುದು. 3 ಒಂದು ಪದಾರ್ಥದ ಬಗ್ಗೆ ಜನಸಾಮಾನ್ಯರಲ್ಲಿ ಸದ್ಭಾವನೆ ಬೆಳೆಸುವುದು. ಮೇಲಿಂದಮೇಲೆ ಆ ಸರಕಿನ ಗುಣಗಳನ್ನು ಉಚಿತ ಮಾದರಿಗಳೊಂದಿಗೆ ಪ್ರಸಾರ ಮಾಡುವುದರ ಮೂಲಕ ಇಂಥ ಸದ್ಭಾವನೆ ಬೆಳೆಸಲು ಸಾಧ್ಯ. 4 ತಮ್ಮ ಸರಕಿನ ಗುಣ ಹೇಗೆ ಅನ್ಯರ ಸರಕುಗಳಿಗಿಂತ ಶ್ರೇಷ್ಠವೆಂಬುದನ್ನು ಸಿದ್ಧಪಡಿಸಿ ತೋರಿಸುವುದು.

	ಈ ಗುರಿಗಳನ್ನು ಸಾಧಿಸಲು ಜಾಹೀರಾತಿಗೆ ಹಲವಾರು ಮಾರ್ಗಗಳಿವೆ. ದಿನ ದಿನಕ್ಕೂ ಈ ಮಾರ್ಗಗಳು ಬೆಳೆಯುತ್ತಿವೆ. ಸಾಮಾನ್ಯವಾಗಿ ಜಾಹೀರಾತಿನ ವಿಧಾನಗಳು ಇವು ; 1 ಪರಿಪತ್ರಗಳು, ಬೆಲೆಪಟ್ಟಿಗಳು, ಇನ್ನಿತರ ಅಚ್ಚಾದ ಸುದ್ದಿಪತ್ರಗಳನ್ನು ಅಂಚೆ ಮತ್ತು ವಿಕ್ರಯ ಪ್ರತಿನಿಧಿಗಳ ಮೂಲಕ ಗ್ರಾಹಕರಿಗೆ ಒದಗಿಸುವುದು : 2 ವೃತ್ತ ಪತ್ರಿಕೆಗಳು-ದೈನಂದಿನ ಸುದ್ದಿ ಪತ್ರಿಕೆಗಳು, ಸಾಹಿತ್ಯ ಸಂಚಿಕೆಗಳು ಮತ್ತು ಚಿತ್ರಮಯ ಸಾಹಿತ್ಯಾಂಕಗಳು ; 3 ವಾಣಿಜ್ಯ ಮುಂತಾದ ತಾಂತ್ರಿಕ ನಿಯತಕಾಲಿಕ ಪತ್ರಿಕೆಗಳು ಮತ್ತು ಉದ್ಯಮಗಳ ವಾರ್ಷಿಕ ಹೊತ್ತಗೆಗಳು, ಇನ್ನಿತರ ವಿಷಯಕೋಶಗಳು ; 4 ಬಿಕರಿದಾರರು ತಮ್ಮ ಅಂಗಡಿಗಳಲ್ಲೂ ವಿಕ್ರಯ ಕೇಂದ್ರಗಳಲ್ಲೂ ಇಟ್ಟಿರುವ ಸರಕುಗಳ ಪ್ರದರ್ಶನ ಭಾಗಗಳು ; 5 ಭಿತ್ತಿಪತ್ರಗಳು, ವಿದ್ಯುದ್ದೀಪಗಳಿಂದ ರಂಜಿತವಾದ ಫಲಕಗಳು ; 6 ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶಿಸುವ ಚಲನಚಿತ್ರಗಳು ಹಾಗೂ ಸ್ಲೈಡುಗಳು ; 7 ರೇಡಿಯೋ ಮತ್ತು ಟೆಲಿವಿಷನ್ ; 8 ಮಾದರಿಗಳ ವಿತರಣ ; 9 ಔದ್ಯೋಗಿಕ ವಸ್ತುಪ್ರದರ್ಶನಗಳು ; 10 ಗ್ರಾಹಕರ ಮನೆಯ ಬಾಗಿಲಿಗೆ ಹೋಗಿ ನಡೆಸುವ ವೈಯಕ್ತಿಕ ಪ್ರಚಾರ. ಇಷ್ಟೆಲ್ಲ ಜಾಹೀರಾತು ವಿಧಾನಗಳಲ್ಲಿ ಯಾವುದನ್ನು ಆರಿಸಬೇಕೆಂಬುದು ಜಾಹೀರಾತುದಾರನನ್ನು ಹಾಗೂ ಅವನು ಬಿಕರಿ ಮಾಡುವ ಸರಕು ಸೇವೆಗಳನ್ನು ಅವಲಂಬಿಸಿದೆ.							(ಕೆ.ಎಸ್.ಆರ್.ಎ.)

ಜಾಹೀರಾತನ್ನು ಉತ್ಪನ್ನಸಂಬಂಧಿ, ಸಾಂಸ್ಥಿಕ (ಇನ್‍ಸ್ಟಿಟ್ಯೂಷನಲ್)-ಎಂದು ಎರಡು ಬಗೆಯಾಗಿ ವಿಂಗಡಿಸುವುದು ಸಾಧ್ಯ. ವಿಕ್ರಯಿಸಬೇಕಾದ ಪದಾರ್ಥ ಅಥವಾ ಛಾಪನ್ನು (ಬ್ರಾಂಡ್) ಪ್ರಧಾನವಾಗಿ ಪರಿಗಣಿಸಿ ಮೊದಲಾದ ಜಾಹೀರಾತು ಉತ್ಪನ್ನಸಂಬಂಧಿ. ಒಂದು ವಿಶಿಷ್ಟ ಮಾದರಿಯ ಮೋಟಾರುಕಾರು, ರೇಡಿಯೋ ಮುಂತಾದವುಗಳ ಉಪಯುಕ್ತತೆ, ಗುಣ ಮುಂತಾದವನ್ನು ವರ್ಣಿಸುವ ಜಾಹೀರಾತುಗಳು ಈ ಬಗೆಯವು. ಪದಾರ್ಥವನ್ನು ಅಥವಾ ಉತ್ಪನ್ನವನ್ನು ತಯಾರಿಸುವ ಅಥವಾ ವಿಕ್ರಯಿಸುವ ಸಂಸ್ಥೆಯನ್ನು ಪ್ರಧಾನವಾಗಿ ಪರಿಗಣಿಸಿ ಮಾಡಲಾದ್ದು ಸಾಂಸ್ಥಿಕ ಜಾಹೀರಾತು, ಒಂದು ಸಂಸ್ಥೆಯ ಹಿರಿಮೆ, ಅಲ್ಲಿ ನಡೆಯುತ್ತಿರುವ ಸಂಶೋಧನಕಾರ್ಯ, ಉತ್ಪನ್ನವನ್ನು ಉತ್ತಮಪಡಿಸಲು ಸತತವಾಗಿ ಅದು ನಡೆಸುತ್ತಿರುವ ಪ್ರಯತ್ನ-ಇವನ್ನು ಬಣ್ಣಿಸುವ ಜಾಹೀರಾತುಗಳು ಇದಕ್ಕೆ ಉದಾಹರಣೆ. ಸರಕಿನ ಬಿಕರಿದಾರರು ತಮ್ಮಲ್ಲಿ ಬಿಕರಿಗೆ ಇರುವ ಸರಕುಗಳನ್ನು ವರ್ಣಿಸಲು ಮೊದಲನೆಯ ಬಗೆಯ ಜಾಹೀರಾತನ್ನೂ ತಮ್ಮ ಸಂಸ್ಥೆಯ ಹಿರಿಮೆ ಗರಿಮೆಗಳನ್ನು ಬಣ್ಣಿಸಲು, ತಮ್ಮ ಸ್ವರೂಪವನ್ನು ಬಿತ್ತರಿಸಲು ಎರಡನೆಯ ಬಗೆಯ ಜಾಹೀರಾತನ್ನೂ ಕೈಗೊಳ್ಳುತ್ತಾರೆ. ಉತ್ಪಾದಕರು, ಬಿಕರಿದಾರರು-ಇಬ್ಬರಲ್ಲೂ ಸಾಮಾನ್ಯವಾಗಿ ಉತ್ಪನ್ನ ಜಾಹೀರಾತುಗಳೇ ಅಧಿಕ ಜಾಹೀರಾತುಗಳ ಉದ್ದೇಶಗಳ ನೇರಕ್ರಿಯೆಯಾಗಿರಬಹುದು, ಇಲ್ಲವೇ ಪರೋಕ್ಷ ಕ್ರಿಯೆಯಾಗಿರಬಹುದು. ಜಾಹೀರಾತಿನ ವಾಚಕ, ವೀಕ್ಷಕ ಅಥವಾ ಶ್ರೋತೃ ಕೂಡಲೇ ಉತ್ಪನ್ನವನ್ನು ಕೊಳ್ಳುವಂತೆ ಕೂಪನ್ನನ್ನು ತುಂಬಿ ಕಳುಹಿಸುವಂತೆ ಪ್ರೇರೇಪಿಸುವಂಥದು ನೇರಕ್ರಿಯೆಯ ಜಾಹೀರಾತು. ಒಂದು ಉತ್ಪನ್ನದ ಅಥವಾ ಛಾಪಿನ ಬಗ್ಗೆ ಅನುಕೂಲಕರ ಮಾನಸಿಕ ಚಿತ್ರ ಕಲ್ಪಿಸುವುದು ಪರೋಕ್ಷ ಕ್ರಿಯೆಯ ಜಾಹೀರಾತು. ಕಾಲಕ್ರಮದಲ್ಲಿ ಈ ಪದಾರ್ಥದ ವಿಕ್ರಯ ಹೆಚ್ಚುತ್ತದೆ. ಉತ್ಪಾದಕ ಸಾಮಾನ್ಯವಾಗಿ ಎರಡನೆಯ ಬಗೆಯ ಉದ್ದೇಶದಿಂದ ಜಾಹೀರಾತು ಮಾಡುತ್ತಾನೆ. ವ್ಯಾಪಾರಿ ಸಾಮಾನ್ಯವಾಗಿ ತತ್‍ಕ್ಷಣದ ಕ್ರಿಯೆಯನ್ನು ಪ್ರಚೋದಿಸುವುದರಲ್ಲಿ ಆಸಕ್ತನಾಗಿರುತ್ತಾನೆ.
 
 	ಪ್ರಾಥಮಿಕ (ಪ್ರೈಮರಿ) ಮತ್ತು ವರಣಾತ್ಮಕ (ಸೆಲೆಕ್ಟಿವ್) ಎಂದೂ ಜಾಹೀರಾತನ್ನು ವಿಂಗಡಿಸಬಹುದು. ಪಾನೀಯಗಳಲ್ಲೆಲ್ಲ ಕಾಫಿಯೇ ಏಕೆ ಉತ್ತಮವೆಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಕಾಫಿ ತಯಾರಕರು ಒಟ್ಟಾಗಿ ಮಾಡುವ ಜಾಹೀರಾತು ಪ್ರಾಥಮಿಕ. ಯಾವುದೋ ಒಂದು ಕಾಫಿ ತಯಾರಿಕಾ ಸಂಸ್ಥೆ ತನ್ನ ಉತ್ಪನ್ನಕ್ಕೆ ಬೇಡಿಕೆ ಕುದುರಿಸಲು ಮಾಡಿದ್ದು ವರಣಾತ್ಮಕ.

ಇತಿಹಾಸ: ಮನವೊಪ್ಪಿಸುವ, ಕೊಳ್ಳುವಂತೆ ಒಡಂಬಡಿಸುವ ಸಾಧನವಾಗಿ ಅಲ್ಲದಿದ್ದರೂ ವಿಷಯವನ್ನು ತಿಳಿಯಪಡಿಸುವ ವಿಧಾನವಾಗಿ ಜಾಹೀರಾತು ಪ್ರಾಚೀನ ನಾಗರಿಕತೆಗಳಲ್ಲೂ ಬಳಕೆಯಲ್ಲಿದ್ದದ್ದಕ್ಕೆ ಇತಿಹಾಸದಲ್ಲಿ ದಾಖಲೆಗಳುಂಟು. ತಪ್ಪಿಸಿಕೊಂಡು ಓಡಿಹೋದ ಗುಲಾಮರ ವರ್ಣನೆಗಳು, ಅವರನ್ನು ಹಿಡಿದು ತಂದುಕೊಟ್ಟವರಿಗೆ ನೀಡಲಾಗುವ ಬಹುಮಾನಗಳು-ಇವನ್ನು ಕುರಿತು ಮೂರು ಸಾವಿರ ವರ್ಷಗಳಿಗೂ ಹಿಂದೆ ಜಂಬುಕಾಗದದ ಮೇಲೆ ಮಾಡಲಾಗಿದ್ದ ಬರಹವೊಂದು ಈಜಿಪ್ಟ್‍ನಲ್ಲಿರುವ ತೀಬ್ಸ್‍ನ ಪ್ರಾಚೀನ ಅವಶೇಷಗಳಲ್ಲಿ ದೊರಕಿದೆ. ತಲೆತಪ್ಪಿಸಿಕೊಂಡಿದ ಷೆಮ್ ಎಂಬ ಗುಲಾಮನನ್ನು ತಂದು ಕೊಟ್ಟರೆ ಒಂದು ಪೂರ್ಣ ಸುವರ್ಣನಾಣ್ಯವನ್ನು ಬಹುಮಾನವಾಗಿ ಕೊಡುವುದಾಗಿ ಹೇಳಲಾಗಿದೆ, ಪ್ರಾಚೀನ ಕಾಲದಲ್ಲಿ ಜಾಹೀರಾತು ಸಂದೇಶಗಳು ಬರವಣಿಗೆಯಲ್ಲೇ ಇರುತ್ತಿರಲಿಲ್ಲ. ಬಿಕರಿಗಿರುವ ಸರಕನ್ನೂ ಕಾಣೆಯಾದ ಜನ ಅಥವಾ ವಸ್ತುಗಳನ್ನು ಪತ್ತೆ ಹಚ್ಚಿ ಕೊಟ್ಟವರಿಗೆ ನೀಡಲಾಗುವ ಬಹುಮಾನಗಳನ್ನು ಸಾರುವ ಜನರು ಪ್ರಾಚೀನ ಗ್ರೀಸಿನಲ್ಲಿ ಸಾಮಾನ್ಯವಾಗಿದ್ದರು. ಎರಡನೆಯ ಉದ್ದೇಶದ ನಿರ್ವಹಣೆಗಾಗಿ ಮಕ್ರ್ಯುರಿಯನ್ನು ವೀನಸ್ ದೇವತೆ ನೇಮಕ ಮಾಡಿಕೊಂಡಿದ್ದಳೆಂದು ಐತಿಹ್ಯವುಂಟು. ರೋಮನರ ಕಾಲದಲ್ಲೂ ಜಾಹೀರಾತು ವಿಶೇಷವಾಗಿ ಬಳಕೆಯಲ್ಲಿತ್ತು. ತಮ್ಮ ಮನೆಗಳ ಗೋಡೆಗಳ ಮೇಲೆ ಜಾಹೀರಾತು ಮಾಡಲು ಸಾರ್ವಜನಿಕವಾಗಿ ಮುಂದೆ ಬರುತ್ತಿದ, ಅದನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದ ಜನರಿದ್ದರು. ಸ್ವತ್ತು ಮಾರಾಟಕ್ಕೆ ಇದೆಯೆಂದು ಕಟ್ಟಡಗಳ ಬಾಗಿಲುಗಳ ಮೇಲೆ ಪ್ರಕಟನೆಗಳನ್ನು ಬರೆಯಿಸುತ್ತಿದ್ದದ್ದುಂಟು. ಖಡ್ಗಮಲ್ಲರ ಪ್ರದರ್ಶನಗಳನ್ನು ಕುರಿತ ಜಾಹೀರಾತುಗಳಿದ್ದ ಗೋಡೆಗಳು ಹಕ್ರ್ಯುಲೇನಿಯಮ್ ಮತ್ತು ಪಾಂಪೇ ಉತ್ಖನನಗಳಲ್ಲಿ ದೊರಕಿವೆ. ಆಟಗಳನ್ನೂ ಬಿಸಿಯಾದ ಹೊಸ ಸಮುದ್ರ ಜಲಸ್ನಾನಗಳನ್ನೂ ಕುರಿತ ಜಾಹೀರಾತುಗಳು ಅಲ್ಲಿಯ ಕೆಲವು ಗೋಡೆಗಳ ಮೇಲೆ ಕಂಡುಬಂದಿವೆ.

	ರೋಮನ್ ಸಾಮ್ರಾಜ್ಯದ ಪತನವಾಗಿ, ಯೂರೋಪು ಟ್ಯೂಟಾನಿಕ್ ಆಕ್ರಮಣಗಳಿಗೆ ಒಳಗಾದಾಗ ಪಾಶ್ಚಾತ್ಯ ನಾಗರಿಕತೆಯ ಪ್ರಗತಿ ಕುಂಠಿತವಾಯಿತು. ವ್ಯಾಪಾರ ಸಂಕುಚಿತಗೊಂಡಿತು. ಈ ಅಂಧಕಾರಯುಗ ಕೊನೆಗೊಳ್ಳುವವರೆಗೂ ಜಾಹೀರಾತಿನಲ್ಲೂ ಅಭಿವೃದ್ಧಿ ಕಂಡುಬರಲಿಲ್ಲ.

	ಮಧ್ಯಯುಗದಲ್ಲಿ ಸಂತೆಗಳೂ ಪರಿಷೆಗಳೂ ವ್ಯಾಪಾರದ ಕೇಂದ್ರಗಳಾದವು. ವರ್ತಕರು ತಮ್ಮ ಸರಕುಗಳ ಗುಣವನ್ನು ಗಟ್ಟಿಯಾಗಿ ಸಾರತೊಡಗಿದರು; ಅದಕ್ಕಾಗಿ ಜನರನ್ನು ನೇಮಿಸಿಕೊಂಡರು. ಸಂತೆ, ಪರಿಷೆಗಳಲ್ಲಿ ಗದ್ದಲ ಇಂದಿಗೂ ಸಾಮಾನ್ಯ. ಸಾರುವುದೇ ಆಗ ಮುಖ್ಯ ಪ್ರಚಾರ ವಿಧಾನವಾಗಿತ್ತು. ಇಂಗ್ಲೆಂಡಿನಲ್ಲೂ ಫ್ರಾನ್ಸಿನಲ್ಲೂ ಸಾರುವುದನ್ನೇ ಕಸುಬನ್ನಾಗಿ ಮಾಡಿಕೊಂಡಿದ್ದ ಜನ ಅನೇಕ. ಹನ್ನೆರಡನೆಯ ಶತಮಾನದಲ್ಲಿ ಅವರು ತಮ್ಮದೇ ಆದ ಸಂಘವೊಂದನ್ನು ರಚಿಸಿಕೊಂಡಿದ್ದರು. ಬಹುಶಃ ಇದು ಜಾಹೀರಾತುದಾರರ ಅತ್ಯಂತ ಪ್ರಾಚೀನ ಸಂಘ. ಅಂಗಡಿಕಾರರೂ ಪಾನಗೃಹಗಳ ಒಡೆಯರೂ ಇದರ ಸೇವೆ ಪಡೆಯುತ್ತಿದ್ದರು. 

	ಅಚ್ಚುಮೊಳೆಗಳ ಉಪಜ್ಞೆಯಾದಾಗ ಜಾಹೀರಾತಿನ ಅಧುನಿಕ ಯುಗ ಆರಂಭವಾಯಿತೆನ್ನಬಹುದು. ಮುದ್ರಣ ಕಲೆಯ ಬೆಳವಣಿಗೆಯಿಂದ ಪುಸ್ತಕಗಳ, ನಿಯತಕಾಲಿಕೆಗಳ ಹಲವು ಪ್ರತಿಗಳನ್ನು ಹಂಚುವುದು ಸಾಧ್ಯವಾಯಿತು. ನೇರ ಸರಳ ಪ್ರಕಟನೆಯ ಬದಲು ವಾದಮಂಡನೆ ಮತ್ತು ಸಲಹೆನೀಡಿಕೆಯ ವಿಧಾನವೇ ಪ್ರಧಾನವಾದ ಆಧುನಿಕ ಜಾಹೀರಾತು ಪದ್ಧತಿ ಬೆಳೆದದ್ದು ಆಗ. ವೃತ್ತಪತ್ರಿಕೆಗಳು ಇದರ ಮುಖ್ಯ ಮಾಧ್ಯಮಗಳಾದವು. ಜಾಹೀರಾತು ಎಂದರೆ ಸಮಾಚಾರ ಮುಟ್ಟಿಸುವುದು ಎಂಬ ಸಂಕುಚಿತ ಅರ್ಥ ಹೋಗಿ, ಅದು ವ್ಯಾಪಾರಪ್ರಕಟನೆ ಎಂಬ ವಿಶಾಲ ಅರ್ಥಹೆಚ್ಚು ಬಳಕೆಗೆ ಬಂತು.

	ಬಿಕರಿಯಾಗುವ ಪ್ರತಿ ವೃತ್ತಪತ್ರಿಕೆ ಅಥವಾ ನಿಯತಕಾಲಿಕೆಯ ಮೇಲೂ ಅರ್ಧ ಪೆನ್ನಿಯ, ಮತ್ತು ಪ್ರತಿ ಜಾಹೀರಾತಿನ ಮೇಲೂ ಒಂದು ಷಿಲಿಂಗಿನ ತೆರಿಗೆಯನ್ನು ಬ್ರಿಟಿಷ್ ಸರ್ಕಾರ ವಿಧಿಸಿದಾಗ (1712) ಜಾಹೀರಾತಿಗೆ ಭಾರಿ ಪೆಟ್ಟು ಬಿತ್ತುದರೂ ಜಾಹೀರಾತಿನ ಬೆಳವಣಿಗೆ ನಿಲ್ಲಲಿಲ್ಲ.

	ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಜಾಹೀರಾತನ್ನು ಆರಂಭಿಸಿದವನು ಬೆಂಜಮಿನ್ ಫ್ರಾಂಕ್‍ಲಿನ್. ಪೆನ್ಸಿಲ್ವೇನಿಯ ಗಜೆಟ್ ಆರಂಭವಾದಗ (1729) ಸಂಪಾದಕೀಯಕ್ಕೆ ಮೊದಲು ಅವನು ಜಾಹೀರಾತನ್ನು ಹಾಕಿದ. ಇದಕ್ಕೂ ಮುಂಚೆ 1704ರಲ್ಲಿ ಬಾಸ್ಟನ್ ನ್ಯೂಸ್‍ಲೆಟರ್ ಪತ್ರಿಕೆಯ ಪ್ರಥಮ ಸಂಚಿಕೆಯಲ್ಲಿ ಮನೆಗಳೇ ಮುಂತಾದ ಸ್ವತ್ತುಗಳ ವಿಕ್ರಯ, ಬಾಡಿಗೆ ಇವನ್ನು ಕುರಿತ ಜಾಹೀರಾತುಗಳಿದ್ದುವು. ಬ್ರಿಟಿಷ್ ಚಕ್ರಾಧಿಪತ್ಯದಲ್ಲಿದ್ದ ಭಾರತವೇ ಮುಂತಾದ ದೇಶಗಳಲ್ಲಿ ಪ್ರಕಟವಾಗುತ್ತಿದ್ದ ಮೊದಮೊದಲ ಜಾಹೀರಾತುಗಳು ವಿಶೇಷವಾಗಿ ಏಕಸ್ವ (ಪೇಟೆಂಟ್) ಔಷಧಿಗಳನ್ನು ಕುರಿತಂಥವಾಗಿದ್ದವು. ಇವುಗಳಿಂದ ಇಡೀ ಜಾಹೀರಾತು ಪದ್ಧತಿಗೇ ಕಳಂಕ ಉಂಟಾಯಿತು.

	19ನೆಯ ಶತಮಾನದಲ್ಲಿ ವಾಣಿಜ್ಯ ಕೈಗಾರಿಕೆಗಳು ಅಗಾಧವಾಗಿ ಬೆಳೆದುವು. ಕೈಗಾರಿಕಾ ಕ್ರಾಂತಿಯಿಂದಾಗಿ ಭೂರಿ ಉತ್ಪಾದನೆ ಸಾಧ್ಯವಾಯಿತು. ಇದಕ್ಕೆ ಅಗತ್ಯವಾದ ಮಾರುಕಟ್ಟೆಯ ವಿಸ್ತರಣಕ್ಕೆ, ಹೊಸಹೊಸ ಮಾರುಕಟ್ಟೆಗಳ ಸೃಷ್ಟಿಗೆ ಜಾಹೀರಾತು ಒಂದು ಸಾಧನವಾಗಿ ಒದಗಿಬಂತು. ಪೆನ್ನಿ ಪತ್ರಿಕೆಗಳ ಮತ್ತು ನಿಯತಕಾಲಿಕೆಗಳ ಬೆಳವಣಿಗೆ, ಶಿಕ್ಷಣ ಪ್ರಸಾರ-ಇವು ಜಾಹೀರಾತಿಗೆ ಪ್ರೇರಣೆ ನೀಡಿದುವು. ಪತ್ರಿಕೆಗಳ ಪ್ರಸಾರದ ವಿಸ್ತರಣೆಗೆ ಸಹಾಯಕವಾದ ಒಂದು ಮುಖ್ಯ ಅಂಶವೆಂದರೆ ಸಾರಿಗೆಯ ಅಭಿವೃದ್ಧಿ. ಒಂದು ಸ್ಥಳದಲ್ಲಿ ಅಚ್ಚಾಗಿ ಪ್ರಕಟವಾದ ಪತ್ರಿಕೆಗಳ ಪ್ರತಿಗಳು ರಾಷ್ಟ್ರದ ಮೂಲೆ ಮೂಲೆಗಳಲ್ಲಿ ವಿಕ್ರಯವಾಗುವುದು ಸಾಧ್ಯವಾಯಿತು. ಜಾಹೀರಾತಿನ ಮುಖ್ಯ ಮಾಧ್ಯಮವಾಗಿ ಪತ್ರಿಕೆಗಳು ಪರಿಣಮಿಸಿದುವು. ಪತ್ರಿಕೆಗಳ ಸಂಖ್ಯೆ, ಪ್ರಸಾರ ಇವು ಅಗಾಧವಾಗಿ ಬೆಳೆದಂತೆ, ಪತ್ರಿಕೆಗಳನ್ನು ಅಧಿಕಾಧಿಕವಾಗಿ ಜಾಹೀರಾತಿಗೆ ಬಳಸಿಕೊಳ್ಳತೊಡಗಿದಂತೆ, ಜಾಹೀರಾತಿಗಾಗಿ ವ್ಯವಹಾರಸಂಸ್ಥೆಗಳು ವೆಚ್ಚಗಳು ಹೆಚ್ಚಿದುವಷ್ಟೇ ಅಲ್ಲದೇ, ಜಾಹೀರಾತಿನಿಂದ ಪತ್ರಿಕೆಗಳ ವರಮಾನವೂ ಹೆಚ್ಚಿತು. ಜಾಹೀರಾತೇ ಮುಖ್ಯ ವರಮಾನ ಮೂಲ; ಇದನ್ನು ಗಳಿಸಲು ಪತ್ರಿಕೆಯ ಪ್ರಸಾರ ಒಂದು ಸಾಧನ- ಎಂಬಂತಾಯಿತು. ಪತ್ರಿಕೆಗಳ ಪುಟಗಳನ್ನು ಹೆಚ್ಚಿಸಲು ಸಾಧ್ಯವಾದ್ದು ಅವುಗಳ ಜಾಹೀರಾತು ವರಮಾನದಿಂದಾಗಿ. ಪತ್ರಿಕೆಗಳು ಜಾಹೀರಾತನ್ನೇ ಅವಲಂಬಿಸುವ ಪರಿಸ್ಥಿತಿ ಬಂದದ್ದರ ದುಷ್ಪರಿಣಾಮಗಳೂ ಇಲ್ಲದೆ ಇರಲಿಲ್ಲ. ಅಂತೂ ಇಂದು ಪ್ರಸಿದ್ಧವಾಗಿರುವ ಅನೇಕ ವ್ಯಾಪಾರಗುರುತುಗಳನ್ನು ಜನಪ್ರಿಯಗೊಳಿಸಲಾದ್ದು ಆ ಕಾಲದಲ್ಲಿ. 

	ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಜಾಹೀರಾತಿನ ಕೆಲವು ದೋಷಗಳನ್ನೂ ಅದರ ದುಷ್ಪರಿಣಾಮಗಳನ್ನೂ ಪರಿಹರಿಸುವತ್ತ ಸರ್ಕಾರಗಳ ವತಿಯಿಂದ ಹಾಗೂ ಉದ್ಯಮಕ್ಷೇತ್ರಗಳಿಂದ ತೀವ್ರವಾದ ಪ್ರಯತ್ನಗಳು ನಡೆದುವು. ಅಮೆರಿಕದಲ್ಲಿ ಸ್ಥಾಪಿತವಾದ (1914) ಪ್ರಸಾರ ಲೆಕ್ಕಶೋಧನ ಪ್ರಸಾರ ಲೆಕ್ಕಶೋಧನ ಬ್ಯೂರೋ (ಆಡಿಟ್ ಬ್ಯೂರೊ ಅಫ್ ಸಕ್ರ್ಯುಲೇಷನ್ಸ್) ಒಂದು ಒಳ್ಳೆಯ ಬೆಳವಣಿಗೆ. ಯಾವುದೇ ಪತ್ರಿಕೆಯ ವ್ಯಾಪ್ತಿಯೆಷ್ಟೆಂಬುದರ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಒದಗುವಂತಾದ್ದು ಜಾಹೀರಾತುದಾರರಿಗೆ ತುಂಬ ಅನುಕೂಲವಾಯಿತು. ಒಂದನೆಯ ಮಹಾಯುದ್ಧಾನಂತರದ ಕಾಲದಲ್ಲಿ ಜಾಹೀರಾತು ಬಹುಮುಖವಾಗಿ ಅಭಿವೃದ್ಧಿ ಹೊಂದಿತು. ಕೈಗಾರಿಕೆಗಳ ರಾಶಿಉತ್ಪನ್ನವನ್ನು ವಿಕ್ರಯಿಸಲು ಜಾಹೀರಾತು ಒಂದು ಅತ್ಯವಶ್ಯ ಸಾಧನ-ಎಂಬ ಭಾವನೆ ಬೆಳೆಯಿತು. ಜಾಹೀರಾತನ್ನು ವಿಶೇಷವಾಗಿ ಬಳಸಿಕೊಂಡ ಮುಖ್ಯ ಸಂಸ್ಥೆಗಳು ಸಾಬೂನ್ ಮತ್ತು ಮೋಟಾರು ಕಂಪನಿಗಳು. ಕೆಲವು ಸಂಸ್ಥೆಗಳು ಪ್ರಖ್ಯಾತ ಕಲಾವಿದರ ಚಿತ್ರಗಳನ್ನು ಕೊಂಡು ಅವನ್ನು ಜಾಹೀರಾತಿನಲ್ಲಿ ಬಳಸಿಕೊಂಡವು. ಚಲನಚಿತ್ರ ನಟನಟಿಯರ ಮೆಚ್ಚನುಡಿಗಳನ್ನೊಳಗೊಂಡ ಜಾಹೀರಾತುಗಳು ತುಂಬ ಪರಿಣಾಮಕಾರಿಯೆಂಬುದು ಮನವರಿಕೆಯಾಯಿತು. ಒಳ್ಳೆಯ ಜಾಹೀರಾತು ಕಾಪಿಲೇಖಕರಿಗೆ ಬೇಡಿಕೆ ಅಧಿಕವಾಯಿತು. 1920ರಲ್ಲಿ ಬಂದ ಹೊಸ ಜಾಹೀರಾತುಮಾಧ್ಯಮವೆಂದರೆ ರೇಡಿಯೋ. 1928ರ ವೇಳೆಗೆ ವ್ಯಾಪಾರಿ ವಿಭಾಗ ರೇಡಿಯೋ ಕಾರ್ಯಕ್ರಮಗಳು ತುಂಬ ಜನಪ್ರಿಯವಾಗತೊಡಗಿದವು 1930ರ ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ಜಾಹೀರಾತಿಗೂ ಪೆಟ್ಟುಬಿದ್ದು ಅತಿ ಚಟುವಟಿಕೆ ಹಾಗೂ ಹಠಾತ್ ಕುಸಿತ್ತಕ್ಕೆ ಜಾಹೀರಾತೇ ಮುಖ್ಯ ಕಾರಣವೆಂಬ ಆಕ್ಷೇಪವೂ ಬಾರದಿರಲಿಲ್ಲ. ಇದನ್ನು ನಿಯಂತ್ರಿಸಲು ಅನೇಕ ಕಾನೂನುಗಳ ಜಾರಿಗೆ ಬಂದವು. ಅನುಭೋಗಿ ಪ್ರತಿರೋಧದ (ಕನ್ಸ್ಯೂಮರ್ ರೆಸಿಸ್ಟನ್ಸ್) ಕಾರಣಗಳ ಅಧ್ಯಯನ ನಡೆಯಿತು. ವ್ಯಾಪಾರಿಗಳು ಜಾಹೀರಾತು ಸಂಶೋಧನೆಯತ್ತ ಗಮನ ಹರಿಸಿದರು. ಯಾವ ಬಗೆಯ ಜಾಹೀರಾತು ತುಂಬ ಪರಿಣಾಮ ಕಾರಿಯಾಗುವುದೆಂಬುಂದನ್ನು ನಿರ್ಣಾಯಿಸುವ ಪ್ರಯತ್ನಗಳಾದವು. 

	ಎರಡನೆಯ ಮಹಾಯುದ್ಧದ ಅನಂತರ ಕಾಲದಲ್ಲಿ ಪಶ್ಚಿಮದ ರಾಷ್ಟ್ರಗಳಲ್ಲಿ-ಮುಖ್ಯವಾಗಿ ಅಮೆರಿಕಾದಲ್ಲಿ-ಜಾಹಿರಾತಿಗಾಗಿ ಅಗಾಧ ಹಣ ಖರ್ಚಾಗುತ್ತಿದೆ. ಹಿಂದೆ ವಸಾಹತುಗಳಾಗಿದ್ದು ಸ್ವತಂತ್ರವಾದ ದೇಶಗಳಲ್ಲೂ ಜಾಹೀರಾತು ಕಲೆ ಅಭಿವೃದ್ಧಿ ಹೊಂದಿತು. ಈ ಕಾಲದಲ್ಲಿ ಬಂದ ಇನ್ನೊಂದು ಹೊಸ ಮಾಧ್ಯಮ ಟೆಲಿವಿಷನ್, ವೃತ್ತಪತ್ರಿಕೆ ನೇರ ಅಂಚೆ, ಟೆಲಿವೀಷನ್-ಇವು ಅನುಕ್ರಮವಾಗಿ ಮೂರು ದೊಡ್ಡ ಜಾಹಿರಾತು ಮಾಧ್ಯಮಗಳು. ಚಲನಚಿತ್ರವೂ ಇಪ್ಪತನೆಯ ಶತಮಾನದ ಒಂದು ಮುಖ್ಯ ಜಾಹೀರಾತು ಮಾಧ್ಯಮ. ಅಭಿಪ್ರೇರಣೆಯ ಸಂಶೋಧನೆ (ಮೋಟಿವೇಷನ್ ರಿಸರ್ಚ್), ಕ್ರಿಯಾ ಸಂಶೋಧನೆ (ಆಪರೇಷನ್ಸ್ ರಿಸರ್ಚ್) ಇವು ಜಾಹಿರಾತಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಆಗಿರುವ ಎರಡು ಸಂಶೋಧನ ಬೆಳವಣಿಗೆಗಳು. ಮಾನವನ ಸುಪ್ತಮನಸ್ಸಿನ ಅಭಿಪ್ರೇರಣೆಗಳಿಗೆ ಮೊದಲನೆಯದು ವಿಶೇಷ ಗಮನ ನೀಡುತ್ತದೆ. ಜಾಹೀರಾತಿಗೆ ಗಣಿತೀಯ ಉಪಗಮನ (ಮ್ಯಾತಮ್ಯಾಟಿಕಲ್ ಅಪ್ರೋಚ್) ನೀಡುವುದು ಎರಡನೆಯದರ ಉದ್ದೇಶ ಮಾರಾಟ ಕಾರ್ಯಕ್ರಮದ ಇತರ ಸಾಧನಗಳೊಂದಿಗೆ ಇದನ್ನು ಸಮನ್ವಯಗೊಳಿಸುವ ಪ್ರಯತ್ನ ನಡೆದಿದೆ.

	ಅನೇಕ ದೇಶಗಳಲ್ಲಿ ಸರ್ಕಾರಗಳೇ ಬಹು ದೊಡ್ಡ ಜಾಹೀರಾತುದಾರ ಸಂಸ್ಥೆಗಳಾಗಿವೆ. ಕಾಲರಾ ನಿರೋಧ. ಕ್ಷಯರೋಗ ನಿವಾರಣೆ, ಸಿಡುಬು ರೋಗ ತಡೆಗಟ್ಟುವುದು, ಮಲೇರಿಯ ನಿರೋಧ ಕಾರ್ಯಕ್ರಮ ಮುಂತಾದ ಸಾರ್ವಜನಿಕ ಆರೋಗ್ಯ ಕುರಿತ ವಿಚಾರಗಳು, ಸರ್ಕಾರದ ನೀತಿಗಳನ್ನೂ ಉದ್ಯಮಗಳನ್ನೂ ಕುರಿತ ಪ್ರಚಾರ-ಮುಂತಾದ ನಾನಾ ಉದ್ದೇಶಗಳಿಂದ ಸರ್ಕಾರಗಳು ಅಗಾಧ ವೆಚ್ಚದ ಜಾಹೀರಾತುಗ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿವೆ. ಅನೇಕ ಪತ್ರಿಕೆಗಳು ಸರ್ಕಾರಿ ಜಾಹೀರಾತುಗಳನ್ನೂ ನಂಬಿರುವುದೂ ಉಂಟು. ಪತ್ರಿಕೆಗಳಿಗೆ ಜಾಹೀರಾತು ಕೊಡುವ, ತಡೆಯುವ, ನಿಯಂತ್ರಿಸುವ ನೀತಿಗಳಿಂದ ಸರ್ಕಾರಗಳು ಪತ್ರಿಕೆಗಳ ಮೇಲೆ ಹತೋಟಿ ಹೊಂದಿ. ಅವುಗಳ ಸ್ವಾಂತಂತ್ರ್ಯಕ್ಕೆ ಅಡ್ಡಿಯುಂಟುಮಾಡುತ್ತಿವೆಯೆಂಬ ದೂರು ಇಲ್ಲದೆ ಇಲ್ಲ. ಬೃಹದ್ ವಾಣಿಜ್ಯ ಸಂಸ್ಥೆಗಳು ಜಾಹೀರಾತುಗಳ ಮೂಲಕ ಪತ್ರಿಕೆಗಳ ಧೋರಣೆಗಳ ಮೇಲೆ ಅನುಚಿತವಾದ ರೀತಿಯಲ್ಲಿ ಹತೋಟಿ ಸ್ಥಾಪಿಸಿವೆಯೆಂಬುದೂ ಒಂದು ಅಪವಾದ.

	ಜಾಹೀರಾತು ಉದ್ಯಮ: ಮಾರಾಟ ಪ್ರಕ್ರಿಯೆಯಲ್ಲಿ ಜಾಹೀರಾತು ಒಂದು ಅಂಗ. [ಉಳಿದ ಅಂಗಗಳು ಮಾರುಕಟ್ಟೆ ಸಂಶೋಧನೆ, ಉತ್ಪನ್ನ ಅಭಿವೃದ್ಧಿ ಮತ್ತು ಆಲೇಖ್ಯ, ಸಂವೇಷ್ಟನ (ಪ್ಯಾಕೇಜಿಂಗ್), ವಿತರಣ, ವಿಕ್ರಯ ಪ್ರವರ್ತನ ಮತ್ತು ವಿಕ್ರಯಾನಂತರ ಸೇವೆ]. ಆದರೂ ಇದು ಇಂದು ಅಗಾಧವಾಗಿ ಬೆಳೆದಿದೆ. ಇದಕ್ಕಾಗಿ ಖರ್ಚಾಗುತ್ತಿರುವ ಹಣವು ಅಗಾಧ. ಆದ್ದರಿಂದ ಇದನ್ನು ಇಂದು ಪ್ರತ್ಯೇಕ ಉದ್ಯಮವೆಂದೇ ಪರಿಗಣಿಸಲಾಗಿದೆ. ಜಾಹೀರಾತು ಉದ್ಯಮವನ್ನು ಸ್ಥೂಲವಾಗಿ ನಾಲ್ಕು ವಿಭಾಗಗಳಾಗಿ ವಿಂಗಡಿಸಬಹುದು :1 ಜಾಹೀರಾತುದಾರರು, 2 ಜಾಹೀರಾತು ಅಭಿಕರಣಗಳು (ಏಜೆನ್ಸಿಗಳು), 3 ಮಾಧ್ಯಮಗಳ ಒಡೆಯರು ಮತ್ತು ಆನುಷಂಗಿಕ (ಆನ್ಸಿಲರಿ) ಸೇವೆಗಳು. 

	ಜಾಹೀರಾತುದಾರರು : ಎಲ್ಲ ದೊಡ್ಡ ಸಂಸ್ಥೆಗಳೂ ತಮ್ಮ ಉತ್ಪನ್ನಗಳನ್ನೋ ಸೇವೆಗಳನ್ನೋ ಕುರಿತ ಜಾಹೀರಾತುಗಳನ್ನು ಪ್ರಕಟಿಸುತ್ತವೆ. ಇವು ಜಾಹೀರಾತುದಾರ ಸಂಸ್ಥೆಗಳು. ಇಂಥ ಪ್ರತಿಯೊಂದು ಸಂಸ್ಥೆಯಲ್ಲೂ ಸಾಮಾನ್ಯವಾಗಿ ಜಾಹೀರಾತು ಇಲಾಖೆ ಇರುತ್ತದೆ. ಸಂಸ್ಥೆಯ ಗಾತ್ರಕ್ಕೆ ಅನುಗುಣವಾಗಿ ಇದರ ಗಾತ್ರ ವ್ಯತ್ಯಾಸವಾಗುತ್ತದೆ. ಜಾಹೀರಾತು ವ್ಯವಸ್ಥಾಪಕ ಇದರ ತಲೆಯಾಳು. ಮಾರುಕಟ್ಟೆ ನೀತಿಯ ಚೌಕಟ್ಟಿನೊಳಗೆ ಜಾಹೀರಾತು ನೀತಿಯ ರೂಪಣೆ ಹಾಗೂ ಜಾರಿ; ಪತ್ರಿಕೆ, ಟೆಲಿವಿಷನ್, ರೇಡಿಯೊ ಮತ್ತು ಭಿತ್ತಿ ಪತ್ರವೇ ಮುಂತಾದ ಜಾಹೀರಾತುಗಳ ನಿರ್ವಹಣೆ; ಜಾಹೀರಾತು ಸಾಮಾಗ್ರಿಯ ರಚನೆ, ಉತ್ಪಾದನೆ ಹಾಗೂ ವಿತರಣೆ; ವಿಕ್ರಯ ಪ್ರವರ್ತನೆಯ ಚಟುವಟಿಕೆಗಳ ಸಂಘಟನೆ-ಇವು ಜಾಹೀರಾತು ಇಲಾಖೆಯ ಕಾರ್ಯಭಾರಗಳು. ಜಾಹೀರಾತು ವ್ಯವಸ್ಥಾಪಕರನ್ನು ನೇಮಿಸಿ, ಜಾಹೀರಾತೂ ಸೇರಿದಂತೆ ಮಾರಾಟದ ಎಲ್ಲ ಕಾರ್ಯಗಳನ್ನೂ ನಿರ್ವಹಿಸುವ ಹೊಣೆಯನ್ನು ಅವರಿಗೆ ವಹಿಸುವುದು ಈಚಿನ ಪ್ರವೃತ್ತಿ. ಜಾಹೀರಾತುದಾರ ಸಂಸ್ಥೆಗೂ ಜಾಹೀರಾತು ಅಭಿಕರಣಕ್ಕೂ ನಡುವಣ ಕೊಂಡಿಯಂತೆ ಜಾಹೀರಾತು ವ್ಯವಸ್ಥಾಪಕ ಅಥವಾ ಛಾಪು ವ್ಯವಸ್ಥಾಪಕ ವರ್ತಿಸುತ್ತಾನೆ. 

	ಜಾಹೀರಾತು ಅಭಿಕರಣ: ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸುವವರು ತಮ್ಮ ಕಕ್ಷಿಗಳ (ಕ್ಲೈಯೆಂಟ್ಸ್) ಪದಾರ್ಥ ಅಥವಾ ಸೇವೆಗಳನ್ನೇ ಬಳಸುವಂತೆ ಜಾಹೀರಾತು ಮತ್ತು ವಿಕ್ರಯ ಪ್ರವರ್ತನ ಪ್ರಚಾರಕಾರ್ಯಗಳನ್ನು ನಡೆಸುವ ಸಂಸ್ಥೆಗಳು ಜಾಹೀರಾತು ಅಭಿಕರಣಗಳು. ಈ ಕಾರ್ಯವನ್ನು ನಿರ್ವಹಿಸಲು ಜಾಹೀರಾತು ಅಭಿಕರಣ ಸಂಸ್ಥೆಗಳು ನಾನಾ ಬಗೆಯ ಚಟುವಟಿಕೆಗಳಲ್ಲಿ ತೊಡಗುತ್ತವೆ. ಅವು ನೀಡುವ ಸೇವೆ ತುಂಬ ವ್ಯಾಪಕವಾದ್ದು ಜಾಹೀರಾತು ಮಾಡಬೇಕಾದ ಪದಾರ್ಥ ಅಥವಾ ಸೇವೆಯ ಗುಣ ಮತ್ತು ಉಪಯುಕ್ತತೆ, ಬೆಲೆ ನಿರ್ಧರಣೆ, ಸ್ಪರ್ಧಾತ್ಮಕ ಅನುಕೂಲಗಳು, ಅದು ಬಿಕರಿಯಾಗುವ ಮಾರುಕಟ್ಟೆಗಳು ಇವುಗಳ ವಿಶ್ಲೇಷಣೆ ನಡೆಸಿದ ಮೇಲೆ, ಆ ಪದಾರ್ಥಗಳ ಜಾಹೀರಾತಿಗೆ ಸೂಕ್ತವಾದ ಮಾಧ್ಯಮ ಹಾಗೂ ಜಾಹೀರಾತು ಸಂದೇಶಗಳ ಬಗ್ಗೆ ಸಲಹೆ ನೀಡಬೇಕು. ಸಂವೇಷ್ಟನ, ವಿತರಣೆ ಮುಂತಾದ, ಮಾರಾಟ ಪ್ರಕ್ರಿಯೆಯ ಇತರ ಅಂಶಗಳನ್ನು ಕುರಿತೇ ಅಲ್ಲದೆ ಪದಾರ್ಥದ ಉತ್ತಮಿಕೆಗೂ ಅವು ಸಲಹೆ ನೀಡಬಹುದು. ತಾವು ನೀಡಿದ ಜಾಹೀರಾತು ಯೋಜನೆಯ ಸ್ವೀಕಾರವಾದ ಮೇಲೆ, ಜಾಹೀರಾತಿನ ಉದ್ದೇಶ ಸಫಲವಾಗುವಂತೆ ಪ್ರತಿಯೊಂದು ಘಟ್ಟದಲ್ಲೂ ಅವು ತನಿಖೆ ಹಾಗೂ ಸಂಶೋಧನೆ ನಡೆಸುತ್ತವೆ. 

ಚಿತ್ರ-ಜಾಹೀರಾತು-ಅಭಿಕರಣ

	ಜಾಹೀರಾತು ಅಭಿಕರಣ ಕ್ರಿಯೆಯ ಶಿರಃಪ್ರಾಯವಾದ ಕಾರ್ಯವೆಂದರೆ ಲೆಕ್ಕನಿರ್ವಹಣೆ. ಲೆಕ್ಕ ನಿರ್ವಾಹಕರು ಈ ಕಾರ್ಯದ ಮುಖ್ಯ ಸಂಯೋಜಕರು. ಅವರು ಕಕ್ಷಿಗಳ ಜಾಹೀರಾತು ಅಥವಾ ಛಾಪು ವ್ಯವಸ್ಥಾಪಕರೊಂದಿಗೆ ಸಹಯೋಗದಿಂದ ಕೆಲಸ ಮಾಡುತ್ತಾರೆ. ಅವರ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಜಾಹೀರಾತು ಯೋಜನೆಗಳು ಕ್ರಮಬದ್ಧವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ. ಅವರು ಒಳ್ಳೆಯ ಆಡಳಿತಗಾರರು ಮಾತ್ರವಲ್ಲ; ಜಾಹೀರಾತು ನೀತಿಯ ವಿಚಾರವಾಗಿ ಸಲಹೆ ನೀಡುವಷ್ಟು ಪ್ರಾಮುಖ್ಯ ಹೊಂದಿರುತ್ತಾರೆ. ಮಾರಾಟ ಕಲೆಯಲ್ಲಿ ಅವರು ನಿಷ್ಣಾತರು. ಮಾರುಕಟ್ಟೆ ಸಂಶೋಧನೆ, ವಿಶ್ಲೇಷಣೆ, ಮಾರಾಟ, ಜಾಹೀರಾತು ಮಾಧ್ಯಮವನ್ನು ನಿರ್ಧರಿಸಿ ಅದನ್ನು ಕೊಳ್ಳುವುದು, ಜಾಹೀರಾತಿನ ರಚನೆ (ಕಾಪಿ, ಲೇಖನ, ಕಲೆ ಇತ್ಯಾದಿ)-ಮುಂತಾದ ನಾನಾ ಕ್ಷೇತ್ರಗಳಲ್ಲಿ ಲೆಕ್ಕ ನಿರ್ವಾಹಕರಿಗೆ ಪರಿಣತರಾದವರ ಸಹಾಯಕ ಸಿಬ್ಬಂದಿ ಇರುತ್ತದೆ. ತಮ್ಮ ಕಾರ್ಯಕ್ಕಾಗಿ ಜಾಹೀರಾತು ಅಭಿಕರಣ ಸಂಸ್ಥೆಗಳು ಸಂಪಾದಿಸುವ ವರಮಾನದಲ್ಲಿ ಬಹುಭಾಗ ಅವುಗಳ ಕಕ್ಷಿಗಳಿಂದ ಕಮಿಷನ್ ರೂಪದಲ್ಲಿ ಬರುತ್ತದೆ. ಮಾರಾಟ, ಸಂಶೋಧನೆ, ಸಲಹೆ, ಹೊಸ ಉತ್ಪನ್ನದ ಅಭಿವೃದ್ಧಿ ಯೋಜನೆ ಮುಂತಾದ ನಾನಾ ಸೇವೆಗಳಿಗಾಗಿಯೂ ಅವು ಶುಲ್ಕ ಪಡೆಯುತ್ತವೆ. ಜಾಹೀರಾತು ಅಭಿಕರಣ ಸಂಸ್ಥೆಯ ರಚನೆಯ ಎಡಗಡೆ ತೋರಿಸಿದೆ.

	ಮಾಧ್ಯಮಗಳ ಒಡೆಯರು: ಯಾವ ಸಾಧನ ಅಥವಾ ವಾಹನದ ಮೂಲಕ ಜಾಹೀರಾತು ಸಂದೇಶವನ್ನು ತಲಪಿಸಲಾಗುವುದೋ ಅದು ಜಾಹೀರಾತು ಮಾಧ್ಯಮ. ಪತ್ರಿಕೆಗಳು, ಟೆಲಿವಿಷನ್, ಚಲನಚಿತ್ರ, ಭಿತ್ತಿಪತ್ರ-ಇವು ಮುಖ್ಯ ಮಾಧ್ಯಮಗಳು. ಇವಲ್ಲದೆ ಇನ್ನೂ ನಾನಾ ಮಾಧ್ಯಮಗಳುಂಟು ಮಾಧ್ಯಮ ಸಂಸ್ಥೆಗಳ ಕಾರ್ಯ ದ್ವಿಮುಖವಾದದ್ದು. ಜಾಹೀರಾತು ಸ್ಥಳ ಮತ್ತು ಕಾಲಗಳನ್ನು ಕೊಳ್ಳುವ ಬಗ್ಗೆ ತಿರ್ಮಾನ ಮಾಡುವವರ ಗಮನಕ್ಕೆ ಬರುವಂತೆ ಅವರು ತಮ್ಮ ಮಾಧ್ಯಮಗಳ ಬಗ್ಗೆ ಜಾಹೀರಾತು ಮಾಡಬೇಕು; ಮತ್ತು ತಮ್ಮ ಮಾಧ್ಯಮಗಳು ಜನರ ಗಮನಕ್ಕೆ ಬರುವಂತೆ ಅವುಗಳ ಓದುಗರ, ಪ್ರೇಕ್ಷಕರ ಮತ್ತು ಶ್ರೋತೃಗಳ ಸಂಖ್ಯೆ ಅಧಿಕವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹೀಗಾಗಿ ಮಾಧ್ಯಮಗಳ ಒಡೆಯರೂ ವಾಸ್ತವವಾಗಿ ಭಾರಿ ಜಾಹೀರಾತುದಾರರಾಗಿರುತ್ತಾರೆ. ಅವರು ಜಾಹೀರಾತು ಮಾಡುವುದು ತಮ್ಮ ಮಾಧ್ಯಮಗಳ ಬಗ್ಗೆ.

	ಜಾಹೀರಾತು ಮಾಧ್ಯಮ ಸಂಸ್ಥೆಯ ಮುಖ್ಯ ಅಧಿಕಾರಿ ಜಾಹೀರಾತು ವ್ಯವಸ್ಥಾಪಕ (ಅಡ್ವರ್ಟೈಸ್‍ಮೆಂಟ್ ಮ್ಯಾನೇಜರ್). ಅವನು ವಾಸ್ತವವಾಗಿ ಸ್ಥಳ ವಿಕ್ರಯದಾರ. ಅವನ ಅಧೀನದಲ್ಲಿ ಅನೇಕ ನೌಕರರಿರುತ್ತಾರೆ. ಇವರು ಜಾಹೀರಾತುದಾರರನ್ನು ಮತ್ತು ಜಾಹೀರಾತು ಅಭಿಕರಣ ಸಂಸ್ಥೆಗಳನ್ನು ಭೇಟಿ ಮಾಡಿ ತಮ್ಮ ಮಾಧ್ಯಮದ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಬೇಕು ತಮ್ಮ ಮಾಧ್ಯಮವನ್ನು ಜನಪ್ರಿಯಗೊಳಿಸಲು ಇವರು ಅಭಿಕರಣ ಸಂಸ್ಥೆಗಳ ಸಹಕಾರದಿಂದ ಅದರ ಬಗ್ಗೆ ಜಾಹೀರಾತು ಮಾಡಬೇಕು.

	ಮಾಧ್ಯಮಗಳ ನಡುವಣ ಸ್ವರ್ಧೆಯಿಂದಾಗಿ ಅನೇಕ ಮಾಧ್ಯಮ ಗುಂಪುಗಳು ತಮ್ಮದೇ ಅದ ಕೇಂದ್ರಸಂಸ್ಥೆಗಳನ್ನು ರಚಿಸಿಕೊಂಡು ತಮ್ಮ ಮಾಧ್ಯಮಗಳ ಬಳಕೆಗಾಗಿ ಪ್ರಚಾರ ಮಾಡುವುದುಂಟು. ಮಹಿಳಾ ಪತ್ರಿಕೆಗಳ ಸಂಘ, ಭಿತ್ತಿಪತ್ರ ಜಾಹೀರಾತು ಸಂಘ ಮುಂತಾದವು ಉದಾಹರಣೆಗಳು.

	ಆನುಷಂಗಿಕ ಸೇವೆಗಳು: ಮೋಟರುಕಾರು ಕೈಗಾರಿಕೆಗೆ ಅಗತ್ಯವಾದ ಬಿಡಿಭಾಗಗಳನ್ನು ತಯಾರಿಸುವ ಅನೇಕ ಸಂಸ್ಥೆಗಳಿರುವಂತೆ, ಜಾಹೀರಾತು ಉದ್ಯಮದಲ್ಲೂ ಅದಕ್ಕೆ ನಾನಾ ಬಗೆಯ ಸೇವೆ ಸಲ್ಲಿಸುವ ಅನೇಕ ಆನುಷಂಗಿಕ ಸಂಸ್ಥೆಗಳುಂಟು. ಮಾರುಕಟ್ಟೆ ಸಂಶೋಧನೆ, ಜಾಹೀರಾತು ಸಂಶೋಧನೆ ಮಾರಾಟ ಸಲಹೆ, ರಚನಾತ್ಮಕ ಸಲಹೆ, ಸಂವೇಷ್ಟನ ಮತ್ತು ಪ್ರದರ್ಶನ ಸಲಹೆ ಕಲಾಭವನ, ಛಾಯಾಚಿತ್ರ, ಜಾಹೀರಾತು ಮುದ್ರಣ ಸಾರ್ವಜನಿಕ ಸಂಪರ್ಕ ಮುಂತಾದ ವಿಶಿಷ್ಟ-ಕಾರ್ಯಗಳಿಗಾಗಿ ಪ್ರತ್ಯೇಕ ಸಂಸ್ಥೆಗಳುಂಟು. ಒಂದು ಯಶಸ್ವೀ ಜಾಹೀರಾತು ಚಳವಳಿಯಲ್ಲಿ ಈ ಎಲ್ಲ ಸಂಸ್ಥೆಗಳ ನೆರವು ಏರ್ಪಟ್ಟಿರುತ್ತದೆ.

	ಚಳುವಳಿ ಯೋಜನೆ: ದೊಡ್ಡ ದೊಡ್ಡ ಉದ್ಗಾರಗಳನ್ನೂ ಪ್ರಾಸಬದ್ಧ ಹೇಳಿಕೆಗಳನ್ನೂ ಒಲಗೊಂಡಿದ್ದರೆ ಅದು ಯಶಸ್ವೀ ಜಾಹೀರಾತು-ಎಂಬುದು ಸಾಮಾನ್ಯ ಭಾವನೆ. ಆದರೆ ಜಾಹೀರಾತು ಚಳವಳಿ ಇಷ್ಟು ಸುಲಭವಲ್ಲ. ಚಿತ್ರಗಳೂ ಪದಗುಚ್ಛಗಳೂ ಇದ್ದ ಮಾತ್ರಕ್ಕೆ ಜಾಹೀರಾತು ಆಗುವುದಿಲ್ಲ. ಜಾಹೀರಾತು ಚಳವಳಿಯನ್ನೂ ಆಯೋಜಿಸಬೇಕು. ಜಾಹೀರಾತು ಸಂದೇಶ ರಚನೆಯಲ್ಲಿ ಸ್ಫೂರ್ತಿಗೆ ಮುಖ್ಯಸ್ಥಾನವುಂಟು. ಆದರೆ ಅದು ಶಿಸ್ತಿಗೆ ಒಳಪಟ್ಟಿರಬೇಕು. ಅಪ್ರಾಸಂಗಿಕವಾಗಿರಬಾರದು. ತಪ್ಪು ಹೇಳಿಕೆ ನೀಡುವ, ತಪ್ಪು ಜನರನ್ನು ಉದ್ದೇಶಿಸಿ ಪ್ರಯೋಗಿಸಿದ ಜಾಣ್ಣುಡಿಗಳೂ ಚಿತ್ರಗಳೂ ಪರಿಣಾಮ ಸಾಧಿಸಲಾರವು. ಸೂಕ್ತ ಗುರಿ ಸೂಕ್ತ ನುಡಿ-ಇವು ಜಾಹೀರಾತಿನ ಎರಡು ಆವಶ್ಯಕಗಳು. ಯಾವ ಬಗೆಯ ಜನರನ್ನು ಉದ್ದೇಶಿಸಲಾಗಿದೆಯೋ ಅವರಿಗೆ ನಿಲುಕುವಂತೆ, ಅವರಲ್ಲಿ ಪ್ರತಿವರ್ತನೆಯಾಗುವಂತೆ ಯೋಗ್ಯ ಮಾಧ್ಯಮದ ಮೂಲಕ ಯೋಗ್ಯರೀತಿಯಲ್ಲಿ ಯೋಗ್ಯಕಾಲದಲ್ಲಿ ಜಾಹೀರಾತು ಚಳವಳಿಯನ್ನು ರೂಪಿಸಬೇಕು. ಒಂದು ಜಾಹೀರಾತು ಏಜೆನ್ಸಿ ಅಥವಾ ಅಭಿಕರಣ ಅನುಸರಿಸುವ ಕ್ರಮ ಈ ರೀತಿ ಇರುತ್ತದೆ : 1 ಉತ್ಪನ್ನದ ಮೌಲ್ಯ ನಿರ್ಧಾರಣ : ಜಾಹೀರಾತು ಮಾಡಬೇಕಾದ ಪದಾರ್ಥಕ್ಕೆ ಎಲ್ಲ ದೃಷ್ಟಿಗಳಿಂದಲೂ ಬೆಲೆ ಕಟ್ಟಲಾಗುತ್ತದೆ. ಅದರ ರಚನೆ ಅಥವಾ ಸಂಯೋಜನೆ, ಆಕಾರ, ಬಣ್ಣ, ಗುಣಗಳು, ಯೋಗ್ಯತೆ, ಸಂವೇಷ್ಟನ, ಬೆಲೆ-ಎಲ್ಲವನ್ನೂ ಪರಿಶೀಲಿಸಲಾಗುತ್ತವೆ. ಅವುಗಳಲ್ಲಿ ಪ್ರತಿಯೊಂದು ಅಂಶವನ್ನೂ ಈ ಪದಾರ್ಥದೊಂದಿಗೆ ಸ್ಪರ್ಧಿಸುವ ಇತರ ಪದಾರ್ಥಗಳ ಪ್ರತಿಯೊಂದು ಅಂಶದೊಂದಿಗೆ ಹೋಲಿಸಿ, ಆ ಪದಾರ್ಥಗಳಿಗಿಂತ ಇದು ಎಷ್ಟರ ಮಟ್ಟಿಗೆ ಉತ್ತಮ ಎಂಬುದನ್ನು ಸ್ಥಾಪಿಸುವುದಲ್ಲದೆ, ಭಾವಿ ಬಳಕೆದಾರನಿಗೆ ಈ ಅನುಕೂಲಗಳು ಎಷ್ಟು ಪ್ರಾಮುಖ್ಯವೆಂಬುವುದನ್ನು ಅರಿಯಲಾಗುತ್ತದೆ. 2 ಮಾರುಕಟ್ಟೆಯ ಮೌಲ್ಯ ನಿರ್ಧಾರಣ : ಪದಾರ್ಥವನ್ನು ಯಾವ ಮಾರುಕಟ್ಟೆಯಲ್ಲಿ ವಿಕ್ರಯಿಸಬೇಕಾಗಿದೆಯೋ ಅದರ ಪ್ರಾಮುಖ್ಯ, ಸ್ವರೂಪ, ಪೃವೃತ್ತಿಗಳು, ಅಲ್ಲಿಯ ಸ್ಪರ್ಧಾತ್ಮಕ ಪರಿಸ್ಥಿತಿ ಮುಂತಾದವನ್ನೆಲ್ಲ ಅಂಕಿ-ಅಂಶಗಳ ನೆರವಿನಿಂದ ಅಭ್ಯಸಿಸಲಾಗುತ್ತದೆ. 3 ಸಂಸ್ಥೆಯ ಮೌಲ್ಯ ನಿರ್ಧಾರಣ : ಜಾಹೀರಾತು ಮಾಡಬಯಸುವ ಸಂಸ್ಥೆಯ ಗಾತ್ರ, ಆ ಸಂಸ್ಥೆಯ ವಿಕ್ರಯ ವ್ಯವಸ್ಥೆ. ಉತ್ಪನ್ನದ ವ್ಯಾಪ್ತಿ, ಮುಂತಾದವನ್ನು ಕುರಿತ ಅಂಕಿ-ಅಂಶಗಳ ಅಧ್ಯಯನವೇ ಮುಂದಿನ ಘಟ್ಟ. ಇದರಿಂದ ಮಾರಾಟ ಹಾಗೂ ಜಾಹೀರಾತು ಕೆಲಸದ ಇತಿಮಿತಿಗಳ ಅರಿವುಂಟಾಗುತ್ತದೆ. ಮಾರಾಟ ಗುರಿಗಳು : ಅನಂತರ, ಲಭ್ಯವಿರುವ ಸಾಧನಗಳ ನೆರವಿನಿಂದ ಸಾಧಿಸಬಹುದಾದ ಗುರಿಯನ್ನು ನಿರ್ಧರಿಸುವುದು ಮುಖ್ಯ. ಗುರಿಗಳನ್ನೂ. ಸಾಧನಗಳನ್ನೂ ಹೊಂದಿಸಲು ಯತ್ನಿಸಿದಾಗ ಅವಾಸ್ತವಿಕತೆಗಳಲ್ಲ ತಾವಾಗಿಯೇ ಹೊರಬರುತ್ತವೆ. ಸಾಧನಗಳು ಪರಿಮಿತವಾಗಿರುವಾಗ ಬಹು ದೊಡ್ಡ ಮಾರಾಟಯೋಜನೆಯನ್ನು ರೂಪಿಸುವುದು ಅಪ್ರಯೋಜಕ. ಮಾರಾಟ ಗುರಿಗಳು ಖಚಿತವಾಗಿಯೂ ಅಳೆಯಲು ಸಾಧ್ಯವಾಗುವಂತೆಯೂ ಇರತಕ್ಕದ್ದು ಅವಶ್ಯ. (ಉದಾ: ಔಷಧ ವಿಕ್ರಯದಾರರಲ್ಲಿ ಂ ಎಂಬ ಔಷಧದ ಹಂಚಿಕೆಯನ್ನು ಒಂದು ವರ್ಷದಲ್ಲಿ ಸೇ. 50ರಷ್ಟು ಹೆಚ್ಚಿಸುವುದು.). 5 ಜಾಹೀರಾತಿನ ಗುರಿ ಮತ್ತು ವಿಧಾನದ ನಿರ್ಧಾರ : ಮಾರಾಟ ಸಂಯೋಗದಲ್ಲಿ (ಮಾರ್ಕೆಟಿಂಗ್ ಮಿಕ್ಸ್) ಜಾಹೀರಾತಿನ ಸ್ಥಾನವೆಂಬುದನ್ನು ನಿರ್ಧರಿಸಿದ ಮೇಲೆ ಜಾಹೀರಾತಿನ ಗುರಿಯೇನಾಗಿರತಕ್ಕದ್ದೆಂಬುದನ್ನೂ ಅದನ್ನು ಸಾಧಿಸಲು ಅನುಸರಿಸಬೇಕಾದ ವಿಧಾನವನ್ನೂ ನಿರ್ಧರಿಸಲಾಗುತ್ತದೆ. ವಿಕ್ರಯದ ಮೇಲೆ ಜಾಹೀರಾತಿನ ಪರಿಣಾಮ ಎಷ್ಟೆಂಬುದನ್ನು ನಿರ್ಣಯಿಸುವುದು ಕಷ್ಟವಾದ್ದರಿಂದ ಜಾಹೀರಾತು ಏನನ್ನು ಸಾಧಿಸಬೇಕೆಂಬುದನ್ನು ನಿರ್ಧರಿಸುವುದು ಕಠಿಣ. ಆದರೂ ಅದನ್ನು ಅಳೆಯುವುದು ಸಾದ್ಯವಾಗುವಂತೆ ಖಚಿತವಾಗಿ ಗುರಿಯನ್ನು ನಿರ್ಧರಿಸಬೇಕು. (ಉದಾ: ಂ ಎಂಬ ಉತ್ಪನ್ನವನ್ನು 25-44 ಪರಿಮಿತಿಯ ವಯಸ್ಸಿನ ಗೃಹಿಣಿಯರ ಇನ್ನೂ ಹೆಚ್ಚಾಗಿ ಬರುವಂತೆ ಈ ಉತ್ಪನ್ನದ ಬಗ್ಗೆ ವಾರಕ್ಕೆ ಸರಾಸರಿ 500 ವಿಚಾರಣಾ ಪತ್ರಗಳು ಬರುವಂತೆ ಮಾಡುವುದು. ಜಾಹೀರಾತಿನ ಗುರಿ ನಿರ್ಧಾರವಾದ ಮೇಲೆ ಆ ಗುರಿಯನ್ನು ಸಾಧಿಸುವ ಮಾರ್ಗದ ಬಗ್ಗೆ ತೀರ್ಮಾನವಾಗುತ್ತದೆ. ಜಾಹೀರಾತು ಚಳವಳಿಯ ಅವಧಿ, ಶ್ರೋತೃಗಳು, ಪ್ರಚಾರ ಮಾಡಬೇಕಾದ ಅಂಶಗಳು ಇವನ್ನೆಲ್ಲ ನಿರ್ಧರಿಸಿದ ಮೇಲೆ ಇದನ್ನು ಎರಡು ಭಾಗಗಳಾಗಿ ಕಾರ್ಯರೂಪಕ್ಕೆ ತರಲಾಗುವುದು. ಮೊದಲನೆಯದು ಜಾಹೀರಾತು ಸಂದೇಶ ರಚನೆ, ಎರಡನೆಯದು ಸಂದೇಶ ರವಾನೆ. ಯಾವ ಮಾಧ್ಯಮದ ಮೂಲಕ ಇದನ್ನು ನಿರ್ವಹಿಸಬೇಕೆಂಬುದನ್ನು ತೀರ್ಮಾನಿಸಿ ಅದರಂತೆ ಕಾರ್ಯ ಪ್ರವೃತ್ತವಾಗಬೇಕಾಗುತ್ತದೆ. ಜಾಹೀರಾತು ಸಂದೇಶ ರಚನೆಯಲ್ಲಿ ಪರಿಗಣಿಸಲಾಗುವ ಸೂತ್ರಗಳುಂಟು : ಮೊದಲನೆಯದಾಗಿ. ಬಹು ಸಂಖ್ಯೆಯ ಪ್ರೇಕ್ಷಕರಿಗೆ ಅಥವಾ ಶ್ರೋತೃಗಳಿಗೆ ನೇರವಾಗಿ ರಂಜಕವಾದ ಅಂಶ ಯಾವುದೆಂಬುದನ್ನು ನಿರ್ಧರಿಸಿ ಅದಕ್ಕೆ ಪ್ರಾಧಾನ್ಯ ನೀಡಬೇಕು. ಗೌಣವಾದವಕ್ಕೆ ದ್ವಿತೀಯಕ ಸ್ಥಾನ. ಉದಾಹರಣಗೆ, ಕೆಲವೇ ವಾರಗಳಲ್ಲಿ ಕಲಿಯಬಹುದಾದ ಶೀಘ್ರ ಲಿಪಿಯನ್ನು ಕುರಿತ ಜಾಹೀರಾತಿನಲ್ಲಿ, ಈ ವಿದ್ಯೆಯನ್ನು ಕಲಿತವರಿಗೆ ದೊರಕುವ ಅನುಕೂಲಗಳಿಗಿಂತ, ಕಲಿಕೆಯ ಕಿರು ಅವಧಿಯೇ ಪ್ರಧಾನ. ಇದೇ ರಂಜಕಾಂಶ. ಇದನ್ನೇ ಪ್ರಮುಖವಾಗಿ ಜಾಹೀರಾತಿನಲ್ಲಿ ಅಳವಡಿಸಬೇಕು. ಎರಡನೆಯದಾಗಿ ಕೊಳ್ಳುವವನ ದೃಷ್ಟಿಯಿಂದ, ಅವನು ನೀಡುವ ಬೆಲೆಗೆ ಪ್ರತಿಯಾಗಿ ಅವನಿಗೆ ದೊರಕುವ ಪ್ರತಿಫಲದ ದೃಷ್ಟಿಯಿಂದ, ಜಾಹೀರಾತನ್ನು ರಚಿಸಬೇಕು. ಜಾಹೀರಾತು ಓದುವವನು ತಿಳಿಯಬಯಸಬಹುದಾದ ಮಾಹಿತಿ ಅವನಿಗೆ ಲಭ್ಯವಾಗಬೇಕು. ಉದಾಹರಣೆಗೆ ರೇಡಿಯೋ ಜಾಹೀರಾತಿನಲ್ಲಿ ಪ್ರತಿಯೊಂದು ರೇಡಿಯೋವಿನ ಪ್ರಧಾನ ಗುಣಗಳ ಜೊತೆಗೆ ಅದರ ವಾಲ್ವಗಳ ಸಂಖ್ಯೆ, ಪಟ್ಟಿಗಳು, ಬೆಲೆ ಇವನ್ನೂ ಪ್ರಕಟಿಸಬೇಕು. ಮೂರನೆಯದು ವಚನಪರಿಪಾಲನೆ, ಜಾಹೀರಾತು ಮಾಡಿದ ಸರಕಿನ ಬಗ್ಗೆ ಸಲ್ಲದ ಭರವಸೆ, ಉತ್ಪ್ರೇಕ್ಷೆ ಇರಬಾರದು. ಇದರಿಂದ ದೀರ್ಘಕಾಲದಲ್ಲಿ ಜಾಹೀರಾತುದಾರನ ಹಿತಕ್ಕೆ ಧಕ್ಕೆ ಉಂಟಾಗುತ್ತದೆ. ನಾಲ್ಕನೆಯದಾಗಿ, ಜನರ ಗಮನ ಸೆಳೆಯುವಂತೆ, ಅವರ ಆಸಕ್ತಿ ಉಳಿಯುವಂತೆ ಅವರ ನೆನಪಿನಿಂದ ಪದಾರ್ಥ ಮಾಸದಂತೆ, ಪದಾರ್ಥದಲ್ಲಿ ಬಯಕೆ ಮೂಡುವಂತೆ ಅದನ್ನು ಪಡೆಯಲು ಕಾರ್ಯಪ್ರವೃತ್ತರಾಗುವಂತೆ ಜಾಹೀರಾತನ್ನು ರಚಿಸಬೇಕಾಗುತ್ತದೆ. ಒಟ್ಟಿನಲ್ಲಿ ಜಾಹೀರಾತು ಜನರೊಂದಿಗೆ ನಡೆಸುವ ಸಂಭಾಷಣೆ. ವಿಷಯ ನಿವೇದನೆ, ವಿಜ್ಞಾಪನೆ, ಪ್ರಾಮಾಣಿಕತೆ ಇದರ ಜೀವ.

	ಮಾಧ್ಯಮಗಳು : ಆಧುನಿಕ ಯುಗದಲ್ಲಿ ಜಾಹೀರಾತಿನ ಮಾಧ್ಯಮಗಳು ಅನೇಕ. ಸಂದೇಶವಾಹಕಗಳಾದ ಇವುಗಳಲ್ಲಿ ಯಾವುದನ್ನು ಎಷ್ಟರಮಟ್ಟಿಗೆ ಬಳಸಿಕೊಳ್ಳಬೇಕೆಂಬುದೂ ಮುಖ್ಯವಾದ್ದೇ. ದಿನ, ವಾರ, ನಿಯತಕಾಲಿಕ, ಪ್ರಾಂತೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಪತ್ರಿಕೆಗಳು (ಇವುಗಳಲ್ಲಿ ಭಿನ್ನ ಆಸಕ್ತಿಗಳ, ಉದ್ಯೋಗಿಗಳ, ವಯಸ್ಕರ ಪತ್ರಿಕೆಗಳೂ ಉಂಟು), ರೇಡಿಯೋ, ಟೆಲಿವಿಷನ್, ಚಲನಚಿತ್ರ, ಹೊರಾಂಗಣದ ಮಾಧ್ಯಮಗಳಾದ ಭಿತ್ತಿಪತ್ರಗಳು, ಸಾರಿಗೆ ವಾಹನಗಳು ಮತ್ತು ವಿದ್ಯುತ್ ಅಂಕಣಗಳು, ಇವುಗಳೇ ಅಲ್ಲದೆ ನೇರವಾಗಿ ಅಂಚೆಯ ಮೂಲಕ ಪ್ರಚ್ಛನ್ನ ಗ್ರಾಹಕರಿಗೆ ಪದಾರ್ಥಗಳನ್ನು ಕುರಿತ ಮಾಹಿತಿ ಕಳುಹಿಸುವುದು_ಹೀಗೆ ನಾನಾ ಮಾಧ್ಯಮಗಳುಂಟು. ಇವುಗಳಲ್ಲಿ ಯಾವು ಯಾವುದನ್ನು ಎಷ್ಟೆಷ್ಟರ ಮಟ್ಟಿಗೆ ಬಳಸಿಕೊಳ್ಳಬೇಕೆಂಬುದನ್ನು ಆಯಾ ಪದಾರ್ಥಗಳು, ಬಳಕೆದಾರರು, ವಿಕ್ರಯ ವ್ಯವಸ್ಥೆ, ಮೀಸಲಿಡಲಾದ ಮೊಬಲಗು ಮುಂತಾದ ಅಂಶಗಳಿಗೆ ಅನುಗುಣವಾಗಿ ಯೋಜಿಸಲಾಗುತ್ತದೆ. 

	ಆರ್ಥಿಕ ಸಾಮಾಜಿಕ ಸಮಸ್ಯೆಗಳು: ಜಾಹೀರಾತು ವಿಧಾನದಿಂದ ಉದ್ಯಮಗಳ ವ್ಯಾಪಾರ ಹೆಚ್ಚಿ ಅವುಗಳ ಲಾಭ ಅಧಿಕವಾಗುವುದೆಂದು ಹೇಳಲಾಗಿದೆ. ಆದರೆ ಜಾಹೀರಾತು ಅಪವ್ಯಯವೆಂಬುದೂ ಅದರಿಂದ ಪದಾರ್ಥಗಳ ಬೆಲೆಗಳು ಅನಾವಶ್ಯಕವಾಗಿ ಏರುವುದೆಂಬುದೂ ಇದರ ಬಗ್ಗೆ ಇರುವ ಎರಡು ಮುಖ್ಯ ಟೀಕೆಗಳು. ಕಡಿಮೆ ಬೆಲೆಗಳಿಗೆ ಸರಕು ವಿಕ್ರಯಿಸಲು ಮುಂದೆ ಬಂದು ಉದ್ಯಮ ಸಂಸ್ಥೆಗಳು ತಮ್ಮ ತಮ್ಮಲ್ಲೇ ಸ್ಪರ್ಧಿಸುವುದಾದರೆ ಅದರಿಂದ ಗ್ರಾಹಕರಿಗೆ ಅನುಕೂಲ. ಒಂದು ನಿರ್ದಿಷ್ಟ ಗುಣಮಟ್ಟದ ಪದಾರ್ಥ ಅತ್ಯಂತ ಕಡಿಮೆ ಬೆಲೆಗಳಲ್ಲಿ ಅವರಿಗೆ ದೊರಕುವಂತಾಗುತ್ತದೆ. ಜಾಹೀರಾತು ಮಾಡಿ ಗ್ರಾಹಕರನ್ನು ಪಡೆಯಲು ಸಂಸ್ಥೆಗಳು ಸ್ಪರ್ಧೆ ನಡೆಸಿದರೆ ಆಗ ಗ್ರಾಹಕರು ಕಡಿಮೆ ಬೆಲೆಗೆ ಸರಕು ಕೊಳ್ಳುವ ಅನೂಕೂಲವನ್ನು ಪಡೆದುಕೊಳ್ಳುತ್ತಾರೆ. ಬಿಕರಿದಾರನ ಜಾಹೀರಾತು ಖರ್ಚುಗಳೂ ಬೆಲೆಯಲ್ಲಿ ಸೇರುವುದರಿಂದ ಗ್ರಾಹಕರು ಹೆಚ್ಚು ಬೆಲೆ ತೆರಬೇಕಾಗುತ್ತದೆ. ಸ್ಥೂಲವಾಗಿ ನೋಡಿದರೆ ಈ ವಾದದಲ್ಲಿ ತಿರುಳಿಲ್ಲ. ಜಾಹೀರಾತಾದ ಸರಕುಗಳನ್ನು ಕೊಳ್ಳಲು ಕೆಲವು ಗ್ರಾಹಕರು ಬಯಸದಿದ್ದರೆ ಅವರ ಬೇಡಿಕೆಯನ್ನು ಪೂರೈಸಿ ಲಾಭ ಪಡೆಯಬಹುದಾದ ಕೆಲವು ವಿಕ್ರಯದಾರರು ಇದ್ದೇ ಇರುತ್ತಾರೆ. ಜಾಹೀರಾತು ಮಾಡದೆ, ಕಡಿಮೆ ಬೆಲೆಗೆ ವಿಕ್ರಯಿಸುವವರನ್ನು ಅರಸಿ ಅವರಿಂದ ಸರಕು ಕೊಳ್ಳಲು ಕೆಲವರು ಯತ್ನಿಸುತ್ತಾರೆ. ಉಳಿದವರು ಜಾಹೀರಾತಿನಿಂದ ಹೆಚ್ಚು ಪ್ರಸಿದ್ಧವಾದ ಸರಕುಗಳನ್ನೇ ಕೊಳ್ಳುತ್ತಾರೆ

	ಆದರೆ ಇದೇ ಸಮಸ್ಯೆಯನ್ನು ಇನ್ನೂ ಸಂಕೀರ್ಣವಾದ ರೂಪದಲ್ಲಿ ಪರೀಶಿಲಿಸಬಹುದು. ಜಾಹೀರಾತಿನ ಮೂಲಕ ಒಂದು ಸಂಸ್ಥೆ ತನ್ನ ಉತ್ಪನ್ನದ ಬೇಡಿಕೆಯ ಪುಟಿತತೆಯನ್ನು ಕಡಿಮೆಗೊಳಿಸುತ್ತದೆ. ಜಾಹೀರಾತಿನಿಂದ ಬೇಡಿಕೆಯ ಗುಣವೇ ಬದಲಾಗುತ್ತದೆ. ಗ್ರಾಹಕರು ಬೆಲೆಗೆ ಪ್ರತಿಕ್ರಿಯೆ ತೋರಿಸುವ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಾರೆ. ಇದರಿಂದ ಜಾಹೀರಾತುದಾರ ಸಂಸ್ಥೆಯ ಗ್ರಾಹಕರು ಅದರ ಸರಕುಗಳನ್ನು ಕೊಳ್ಳದೆ ಇರುವುದಿಲ್ಲ. ಆ ಸಂಸ್ಥೆಯ ಬಗ್ಗೆ ಹೆಚ್ಚು ನಿಷ್ಟಾವಂತರಾಗಿರುತ್ತಾರೆ. ಇದರಿಂದ ಆ ಸಂಸ್ಥೆ ಬೆಲೆಗಳನ್ನು ಹೆಚ್ಚಿಸಿ ಹೆಚ್ಚು ಲಾಭ ಪಡೆಯಬಹುದು. ಜಾಹೀರಾತಿನಿಂದ ಒಂದು ಛಾಪಿನ ಬಗ್ಗೆ ನಿಷ್ಠೆಯನ್ನು ಸೃಷ್ಟಿಸಬಹುದೆಂಬುದು ಒಂದು ಸಾಧ್ಯತೆಯೇ ವಿನಾ, ಹಾಗೆ ಆಗಿಯೇ ಆಗುವುದೆಂದು ನಿಶ್ಚಯವಾಗಿ ಹೇಳಲಾಗುವುದಿಲ್ಲ. ಇದರ ಬಗ್ಗೆ ಲಭ್ಯವಿರುವ ಕೆಲವು ಪುರಾವೆಗಳನ್ನು ಪರಿಶೀಲಿಸಬಹುದಷ್ಟೇ. ಬಹಳ ಹೆಚ್ಚಾಗಿ ಜಾಹೀರಾತು ಮಾಡಲಾಗುವ ಅನುಭೋಗ ವಸ್ತುಗಳಲ್ಲಿ ಪ್ರಸಾಧನ (ಟಾಯಿಲೆಟ್) ಸಾಮಗ್ರಿಗಳೂ ಸೇರಿವೆ. ಜಾಹೀರಾತಿನಿಂದ ಛಾಪು ನಿಷ್ಠೆ (ಬ್ರ್ಯಾಂಡ್ ಲಾಯಲ್ಟಿ) ಉಂಟಾಗುವ ಪ್ರವೃತ್ತಿ ಬೆಳೆಯುವುದಾದರೆ ಮಾರುಕಟ್ಟೆಯಲ್ಲಿ ಈ ಸಾಮಾಗ್ರಿಗಳ ವಿಕ್ರಯದ ಪರಿಮಾಣ ಒಟ್ಟು ವಿಕ್ರಯದಲ್ಲಿ ಹೆಚ್ಚು ಸ್ಥಿರವಾಗಿರಬೇಕು. ಆದರೆ ಈ ಪ್ರವೃತ್ತಿ ಕಂಡುಬಂದಿಲ್ಲ. ಈ ಸರಕುಗಳ ವಿಕ್ರಯಕ್ಕೆ ಇವುಗಳ ಜಾಹೀರಾತು ವೆಚ್ಚದ ಅನುಪಾತ ಅಧಿಕವಾಗಿರುವುದನ್ನು ನೋಡಿದರೆ ಈ ಸರಕುಗಳಲ್ಲಿ ಛಾಪು ನಿಷ್ಠೆ ಇತರ ಸರಕುಗಳಲ್ಲಿಯದಕ್ಕಿಂತ ಕಡಿಮೆಯೆಂದೇ ತೋರುತ್ತದೆ. 
ಜಾಹೀರಾತಿನಿಂದ ಮಾರುಕಟ್ಟೆಯ ಗಾತ್ರ ಹೆಚ್ಚುವುದೆಂದೂ ಇದರಿಂದ ಭೂರಿ ಉತ್ಪಾದನೆ (ಮಾಸ್ ಪ್ರೊಡಕ್ಷನ್) ಸಾಧ್ಯವಾಗಿ, ಅವುಗಳ ಏಕಮಾನ ವೆಚ್ಚ (ಯೂನಿಟ್ ಕಾಸ್ಟ್) ಕಡಿಮೆಯಾಗುವುದೆಂದೂ ವಾದಿಸಲಾಗಿದೆ. ಆದರೆ ಲಭ್ಯವಿರುವ ಸಾಕ್ಷ್ಯಗಳಿಂದ ಇದನ್ನು ಸಿದ್ಧಪಡಿಸಿ ತೋರಿಸುವುದು ಸಾಧ್ಯವಿಲ್ಲ. ಬಹಳವಾಗಿ ಜಾಹೀರಾತನ್ನೇ ಅವಲಂಬಿಸಿರುವ ಹಲವು ಸಂಸ್ಥೆಗಳ ಉತ್ಪಾದನ ಯಂತ್ರ ಸ್ಥಾವರಗಳ ಗಾತ್ರಗಳು ಒಂದೇ ಸಮನಾಗಿಲ್ಲ. ಗಾತ್ರಾನುಗುಣ ಉತ್ಪಾದನ ಉಳಿತಾಯ ಇದರಿಂದ ಸಾಧಿಸದು. ಅನೇಕ ಕೈಗಾರಿಕೆಗಳಲ್ಲಿ ಕೆಲವು ಸಂಸ್ಥೆಗಳು ಬಹು ದೊಡ್ಡವಾಗಿದ್ದರೂ ಅವು ಹೆಚ್ಚಾಗಿ ಜಾಹೀರಾತು ಮಾಡುವುದೇ ಇಲ್ಲ. ಕೈಗಾರಿಕೆಗಳಿಗೆ ಅಗತ್ಯವಾದ ಸರಕುಗಳನ್ನು ಉತ್ಪಾದಿಸುವ ಸಂಸ್ಥೆಗಳು ಉದಾಹರಣೆಗಳು. ಇನ್ನು ಕೆಲವು ಸರಕುಗಳು ವಿಶೇಷವಾಗಿ ಜಾಹೀರಾತಾಗುತ್ತವೆ. ಪ್ರಸಾಧನ ಸರಕುಗಳು ಉದಾಹರಣೆ. ಆದರೆ ಇವನ್ನು ತಯಾರಿಸುವ, ಜಾಹೀರಾತು ಮಾಡುವ, ಸಂಸ್ಥೆಗಳು ಸಾಮಾನ್ಯವಾಗಿ ಸಣ್ಣವು. ಆದ್ದರಿಂದ ಒಟ್ಟಿನಲ್ಲಿ ಜಾಹೀರಾತಿನಿಂದ ಮಾರುಕಟ್ಟೆ ವಿಸ್ತರಿಸಿ, ಭೂರಿ ಉತ್ಪಾದನೆ ಸಾಧ್ಯವಾಗಿ, ಏಕಮಾನ ವೆಚ್ಚ ಇಳಿಯುವುದೆಂಬುದನ್ನು ಸ್ಥಾಪಿಸಲು ನಿರ್ವಿವಾದಾತ್ಮಕವಾದ ಆಧಾರಗಳು ಹೆಚ್ಚಾಗಿ ಇಲ್ಲ. 

 	ಜಾಹೀರಾತಿನ ಪರಿಣಾಮಗಳ ವಿಚಾರದಲ್ಲಿ ಸೋವಿಯೆತ್ ದೇಶದ ಅನುಭವ ಕುತೂಹಲಕರವಾದ್ದು ವ್ಯಾಪಾರ ಗುರುತು (ಟ್ರೇಡ್ ಮಾರ್ಕ್), ಜಾಹೀರಾತು-ಇವೆರಡನ್ನೂ ವಿಷೇಧಿಸಿದ್ದ ಸೋವಿಯೆತ್ ದೇಶ ಈಚೆಗೆ ಜಾಹೀರಾತು ಛಾಪುನಾಮಗಳ ಬಳಕೆಯನ್ನು ಉತ್ತೇಜಿಸುತ್ತಿದೆ. ಅದು ತನ್ನ ಹಳೆಯ ನೀತಿಯನ್ನು ಬಿಟ್ಟುಕೊಡಲು ಪ್ರಬಲವಾದ ಕಾರಣಗಳುಂಟು. ತಮ್ಮ ಉತ್ಪನ್ನದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಪ್ರವೃತ್ತಿ ಉತ್ಪಾದಕರಲ್ಲಿ ತೋರಿಬರುತ್ತಿರಲಿಲ್ಲ. ಏಕೆಂದರೆ ಕೆಟ್ಟ ಸರಕುಗಳನ್ನು ಯಾವ ಸಂಸ್ಥೆ ತಯಾರಿಸಿದವೆಂಬುದನ್ನು ಪತ್ತೆಹಚ್ಚುವುದು ಗ್ರಾಹಕರಿಗೆ ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆಲ್ಲ ಸರ್ಕಾರವೇ ಹೊಣೆಯಾಗುತ್ತಿತ್ತು. ಈಗ ಕಾರ್ಖಾನೆಗಳು ತಮ್ಮ ಸರಕುಗಳಿಗೆ ವ್ಯಾಪಾರ ಗುರುತುಗಳನ್ನು ಬಳಸಬೇಕೆಂದು ವಿಧಿಸುವುದರಿಂದ ಒಂದು ಸರಕಿನ ಗುಣಮಟ್ಟ ಇಳಿದಾಗ ಯಾವ ಕಾರ್ಖಾನೆಯದೆಂಬುದು ಸುಲಭವಾಗಿ ಗೊತ್ತಾಗುತ್ತದೆ. ಅದರ ವ್ಯಾಪಾರ ಇಳಿಯುತ್ತದೆ. ಗ್ರಾಹಕರು ಕಡಿಮೆಯಾಗುತ್ತಾರೆ. ಜಾಹೀರಾತನ್ನು ಪ್ರೋತ್ಸಾಹಿಸುವುದರಿಂದ ಇನ್ನೂ ಒಂದು ಅನುಕೂಲವುಂಟೆಂಬುದನ್ನು ಸೋವಿಯೆತ್ ದೇಶ ಕಂಡುಕೊಂಡಿದೆ. ಹೊಸ ಉತ್ಪನ್ನಗಳಿಗೆ ಬೇಡಿಕೆ ಕುದುರಿಸಲೂ ಹೊಸ ಹೊಸ ಉಪಜ್ಞೆಗಳಿಗೆ ಪ್ರೋತ್ಸಾಹ ನೀಡಲು ಇದು ಸಾಧಕ. ಮೂರನೆಯದಾಗಿ, ಮಾರಾಟ ವ್ಯವಸ್ಥೆಯನ್ನು ಹೆಚ್ಚು ದಕ್ಷವನ್ನಾಗಿ ಮಾಡಿ, ವಿರಳ ಸಾಧನಗಳು ಪೋಲಾಗದಂತೆ ತಡೆಗಟ್ಟಲು ಇದು ಸಹಾಯಕ. ಸರಕುಗಳ ಜಾಹೀರಾತು ಮಾಡಿ, ಸ್ವಯಂ-ಸೇವೆಯ ಅಂಗಡಿಗಳನ್ನು ತೆರೆದು ಹಂಚಿಕೆಯ ವೆಚ್ಚವನ್ನು ತಗ್ಗಿಸಲು ಇದರಿಂದ ಸಾಧ್ಯವಾಗಿದೆ. ಅನೇಕ ದೇಶಗಳಲ್ಲಿ ರೇಡಿಯೋ, ಟೆಲಿವಿಷನ್ ಮುಂತಾದ ಸಂಪರ್ಕ ಮಾಧ್ಯಮ ಸಂಸ್ಥೆಗಳು ಜಾಹೀರಾತುಗಳ ಮೂಲಕವೇ ವರಮಾನ ಗಳಿಸುತ್ತಿವೆ. ಪತ್ರಿಕೆಗಳು ಕೂಡ ತಮ್ಮ ವರಮಾನದ ಮೂರನೆಯ ಎರಡು ಭಾಗವನ್ನು ಪಡೆಯುವುದು ಜಾಹೀರಾತುಗಳಿಂದ. ಉಳಿದ ಒಂದು ಭಾಗ ಬರುವುದು ಪತ್ರಿಕೆಗಳ ವಿಕ್ರಮ ಹಾಗೂ ಚಂದಾಗಳಿಂದ. ಈ ಪರಿಸ್ಥಿತಿಯಿಂದಾಗಿ ಜಾಹೀರಾತುದಾರರ ಪ್ರಭಾವಕ್ಕೆ ಈ ಸಂಪರ್ಕಮಾಧ್ಯಮಗಳೆಲ್ಲ ಸಿಕ್ಕಿಬಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುವುದಲ್ಲದೆ, ಜನರಿಗೆ ಆರೋಗ್ಯಕರವಾದ ಮನೋರಂಜನೆ ದೊರಕುವ ಬದಲು ಕೀಳುಮಟ್ಟದ ವಿಷಪೂರಿತವಾದ ಪ್ರಚಾರಕ್ಕೆ ಅವರು ತುತ್ತಾಗುವ ಅಪಾಯವಿದೆಯೆಂದು ವಾದಿಸಲಾಗಿದೆ. ಆದರೆ ಜಾಹೀರಾತುದಾರರಿಲ್ಲದಿದ್ದರೆ ಇವುಗಳ ಬೆಲೆ ಇನ್ನೂ ಅಧಿಕವಾಗುವುದು. ಪತ್ರಿಕೆಗಳು ಈಗ ಕೊಡುವಷ್ಟು ಪುಟಗಳನ್ನು ಕೊಡಲಾಗುವುದಿಲ್ಲ-ಎಂಬುದು ಇನ್ನೊಂದು ವಾದ. ಸ್ಪರ್ಧೆ ಇರುವಾಗ, ವಿಭಿನ್ನ ಅಭಿಪ್ರಾಯಗಳ ಪ್ರಕಟನೆಗೆ ಅವಕಾಶ ಇರುವಾಗ, ಸತ್ಯವನ್ನು ಮರೆಮಾಚುವುದು ಸಾಧ್ಯವಿಲ್ಲ. ಸರ್ಕಾರ ಈ ಮಾಧ್ಯಮಗಳ ಮೇಲೆ ಹತೋಟಿ ಇಟ್ಟುಕೊಂಡಾಗಲೇ ಅಭಿಪ್ರಾಯ ಸ್ವಾತಂತ್ರ್ಯ ಮೊಟಕಾಗುತ್ತದೆ. ಜನರಿಗೆ ಬೇಕೆನಿಸುವ ಮನೋರಂಜನೆ ದೊರಕುವುದಿಲ್ಲ. ಆದ್ದರಿಂದ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸಾರ್ವಜನಿಕರನ್ನೇ ಅವಲಂಬಿಸಿದ ಪ್ರಚಾರ ಹಾಗೂ ಸಮೂಹ ಸಂಪರ್ಕ ಮಾಧ್ಯಮಗಳು ಹೆಚ್ಚು ಪ್ರಜಾಸತ್ತಾತ್ಮಕವಾಗಿರುತ್ತವೆಂದು ವಾದಿಸಲಾಗಿದೆ. 

 	ಅನುಭೋಗಿಗಳ ಇಚ್ಛಾನಿಚ್ಛೆಗಳನ್ನೂ ರುಚಿಧರ್ಮಗಳನ್ನೂ ಜಾಹೀರಾತುದಾರರು ಗಮನಿಸಿ, ಅವಕ್ಕೆ ತಕ್ಕಂತೆ ಸರಕುಗಳ ಉತ್ಪಾದನೆ ವಿತರಣೆಯ ಕಾರ್ಯ ನಡೆಸುತ್ತಾರೆಂಬುದು ಸಾಮಾನ್ಯವಾಗಿರುವ ಒಂದು ಭಾವನೆ. ಆದರೆ ಇದು ಅಷ್ಟೇನೂ ನಿಜವಲ್ಲ. ಹುಟ್ಟಿದಾಗಿನಿಂದಲೇ ಜನರು ಇತರರ ಅಭಿಪ್ರಾಯಗಳಿಂದಲೂ ಒತ್ತಡಗಳಿಂದಲೂ ರೂಪುಗೊಳ್ಳುತ್ತಾರೆ. ಜೀವನಾದ್ಯಂತ ನಡೆಯುವ ಪ್ರತಿಕ್ರಿಯೆಯಿದು. ತಮ್ಮ ಸರಕುಗಳನ್ನು ಜನರು ಕೊಳ್ಳಬೇಕೆಂದು ಬಯಸುವಾಗ ಜಾಹೀರಾತುದಾರರು ತಮ್ಮ ಹಿತಗಳಿಗೆ ಅನುಸಾರವಾಗಿಯೇ ನಡೆಯುತ್ತಾರೆ. ಆದ್ದರಿಂದ ಔಚಿತ್ಯಪ್ರಜ್ಞೆ ಜನಕ್ಕೆ ಅಗತ್ಯ. ಇತರರ ಮನವೊಲಿಸುವ, ಅವರನ್ನು ಪರಿವರ್ತನೆ ಮಾಡುವ ಸ್ವಾತಂತ್ರ್ಯ ಮುಕ್ತ ಸಮಾಜದಲ್ಲಿ ಇರುವುದು ಅವಶ್ಯ. ಜನ ತಮಗೆ ಅಗತ್ಯವಿಲ್ಲದ ಸರಕುಗಳನ್ನು ಕೊಳ್ಳುವಂತೆ, ಇನ್ನೂ ಉಪಯುಕ್ತವಾಗಿರುವವನ್ನು ತ್ಯಜಿಸುವಂತೆ ಮಾಡುವ ಉದ್ದೇಶದಿಂದ ಜಾಹೀರಾತುದಾರರು ಅನೇಕ ವೇಳೆ ಸುಳ್ಳು ಹೇಳುತ್ತಾರೆನ್ನುವುದುಂಟು. ಆದರೆ ಇಂಥ ಅನೇಕರು ಪರಸ್ಪರ ಸ್ಪರ್ಧಿಸುತ್ತಿರುವುದರಿಂದ ಜನರು ಯಾವೊಂದು ಜಾಹೀರಾತಿನ ಮಾಯಾಜಾಲಕ್ಕೆ ಬೀಳುವುದು ಕಷ್ಟವೆಂದೂ ವಾದಿಸಬಹುದು. ಜಾಹೀರಾತುಗಳಿಂದ ದೇಶದ ತಾಂತ್ರಿಕ ವೈಜ್ಞಾನಿಕ ಬೆಳವಣಿಗೆಯ ಬಗ್ಗೆ, ಉತ್ಪಾದನೆಯಾಗುತ್ತಿರುವ ಸರಕುಗಳ ಗುಣಾವಗುಣಗಳು ಬಗ್ಗೆ ಜನರ ತಿಳಿವಳಿಕೆ ಅಧಿಕವಾಗಿ, ವಿಕ್ರಯದಾರರ ವಿವರಣೆಯಿಲ್ಲದೆ ಅನುಭೋಗಿಗಳೇ ನೇರವಾಗಿ ಸರಕು ಕೊಳ್ಳುವುದಕ್ಕೆ ಸಹಾಯವಾಗುತ್ತದೆ. ಸ್ವಯಂ-ಸೇವೆಯ ಅಂಗಡಿಗಳು ಬೆಳೆಯಬಹುದು. ವಿಕ್ರಯವೆಚ್ಚವನ್ನು ತಗ್ಗಿಸುವುದು ಸಾಧ್ಯ.

	ಅಂಗಡಿಗಳಲ್ಲಿ ಶ್ರಮ ಉಳಿತಾಯ ಯಂತ್ರಗಳ ಬಳಕೆಗೆ ಹೆಚ್ಚು ಅವಕಾಶ ಇರುತ್ತದೆ. ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಜಾಹೀರಾತು ಅಧಿಕಾಧಿಕ ಪಾತ್ರ ವಹಿಸುವ ಸಂಭವ ಹೆಚ್ಚಾಗಿದೆ.						*
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ